ಮೂಡಿಗೆರೆ : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಇಂದು ವಿಶ್ವಕರ್ಮ ಸಂಘದಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯವಾಗಿ ವಡ್ಡನಾಳು ವಿಶ್ವಕರ್ಮ ಮಹಾಸಂಸ್ಥಾನದ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ, ಮೂಡಿಗೆರೆಯ ಶಾಸಕ ಎಂ.ಪಿ ಕುಮಾರಸ್ವಾಮಿ, ಮಾಜಿ ಸಚಿವರಾದ ಮೋಟಮ್ಮ,ವಿಶ್ವಕರ್ಮ ನಿಗಮದ ರಾಜ್ಯಾಧ್ಯಕ್ಷ ಬಾಬು, ಬಿ.ಬಿ ನಿಂಗಯ್ಯ ಹಾಗೂ ಇನ್ನಿತರ ಗಣ್ಯರು ಹಾಜರಿದ್ದರು.
ಪಟ್ಟಣದ ಪ್ರೀತಮ್ ಕನ್ವೆನ್ಷನ್ ಹಾಲ್ ನಲ್ಲಿ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಇಂದು ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ನಡೆಯಿತು.
ವೈಯಕ್ತಿಕ ದ್ವೇಷಗಳನ್ನು ಸಂಘಟನೆಯೊಳಗೆ ತರಬಾರದು ಎಂದು ವಡ್ಡನಾಳು ವಿಶ್ವಕರ್ಮ ಮಹಾಸಂಸ್ಥಾನದ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಆಧುನಿಕತೆ ಬೆಳೆದಂತೆ ಸಂಸ್ಕಾರದ ಕೊರತೆ ಉಂಟಾಗುತ್ತಿದೆ. ಇದರ ಪರಿಣಾಮವು ವಿಭಕ್ತ ಕುಟುಂಬಗಳತ್ತ ಸಾಗುತ್ತಿದ್ದು, ಸಹಬಾಳ್ವೆ ಮರೆಯಾಗುತ್ತಿದೆ. ಬಾಲ್ಯದಿಂದಲೂ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದರೆ ವೃದ್ಧಾಶ್ರಮಗಳನ್ನು ಮುಚ್ಚ ಬಹುದಾಗಿದೆ. ಸಂಘಟನೆಗಳು ವಿಫಲವಾಗಲು ವೈಯಕ್ತಿಕ ದ್ವೇಷ ಕಾರಣವಾಗುತ್ತದೆ. ವೈಯಕ್ತಿಕ ವಿಚಾರಗಳನ್ನು ಮನೆಯಿಂದ ಹೊರಗೆ ಬರದಂತೆ ತಡೆದು ಸಂಘಟನೆಯನ್ನು ಬಲಾಢ್ಯಗೊಳಿಸಬೇಕು. ಸಮಾಜದಲ್ಲಿ ಜಾತಿ ರಾಜಕಾರಣ ನಡೆಯುತ್ತಿದ್ದು , ಹಿಂದುಳಿದ ಸಮುದಾಯಗಳು ಸವಲತ್ತುಗಳು ಸಿಗದೇ ಪರಿತಪಿಸುತ್ತಿದ್ದಾರೆ. ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾದರೂ ಸದೃಢವಾದ ಜನಾಂಗಗಳಿವೆ. ಆದರೆ ಆ ಜನಾಂಗಗಳ ಅಭಿವೃದ್ಧಿಗೆ ಶಿಕ್ಷಣ ಬುನಾದಿಯಾಗಿದೆ. ಪ್ರತಿಯೊಬ್ಬರೂ ಶಿಕ್ಷಣದ ಮಹತ್ವವನ್ನು ಅರಿತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂದರು.
ಶಾಸಕ ಎಂ ಪಿ ಕುಮಾರಸ್ವಾಮಿ ಮಾತನಾಡಿ ಕುಲಕಸುಬುಗಳನ್ನು ನಡೆಸುತ್ತಿರುವ ವಿಶ್ವಕರ್ಮ ಸಮುದಾಯದವರು ಪ್ರತಿಯೊಂದು ಕುಟುಂಬಕ್ಕೂ ನೆರವಾಗುತ್ತಿದ್ದಾರೆ,ಒಗ್ಗಟ್ಟಿನ ಮೂಲಕ ಸಂಘಟಿತರಾಗಿ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ ವಿಶ್ವಕರ್ಮ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಸಂಘಟಿತರಾಗುವ ಮೂಲಕ ರಾಜಕೀಯವಾಗಿ ಬೆಳವಣಿಗೆ ಸಾಧಿಸಿ, ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ವಿಶ್ವಕರ್ಮ ಅಭಿವೃದ್ಧಿಯಲ್ಲಿ ನಿಗಮದ ರಾಜ್ಯಾಧ್ಯಕ್ಷ ಬಾಬು ಪತ್ತಾರ್ ಮಾತನಾಡಿ ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಗ್ರಾಮ ಮಟ್ಟಕ್ಕೆ ಕೊಂಡೊಯ್ಯಲು ಯೋಜನೆ ರೂಪಿಸಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಪಂಚ ಕಸುಬುಗಳ ಉದ್ಯೋಗಿಗಳಿಗೆ ಕೌಶಲ್ಯ ಆಧಾರಿತ ತರಬೇತಿ ನೀಡಿ, ಪಂಚ ಕಸುಬುಗಳಿಗೆ ತಂತ್ರಜ್ಞಾನವನ್ನು ಪರಿಚಯಿಸುವ ಕೆಲಸ ಮಾಡಲಾಗುವುದು. ನಿಗಮದ ವತಿಯಿಂದ ಜನಾಂಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು ಎಂದರು.
ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಸಂಘದ ಅಧ್ಯಕ್ಷ ವಿಠಲಾಚಾರ್, ಕಾರ್ಯದರ್ಶಿ ಮಂಜುನಾಥ್, ಗೌರವಾಧ್ಯಕ್ಷ ಜೆ.ಡಿ.ಮಂಜುನಾಥ ಆಚಾರ್, ಉದ್ಯಮಿ ಶಂಕರಾಚಾರ್, ಯೋಗ ಶಿಕ್ಷಕ ಅಣ್ಣಪ್ಪಚಾರ್, ಕಡಿದಾಳ್, ರಮೇಶ್ ಕಡಿದಾಳ್, ಮಂಜು ಪಟೇಲ್, ಸುಬ್ರಹ್ಮಣ್ಯ, ಗಣಪತಿ ಆಚಾರ್, ರಘುಪತಿ ಆಚಾರ್, ಜ್ಞಾನೇಶ್ ಆಚಾರ್, ಚಂದ್ರಶೇಖರ್ ಆಚಾರ್,ಮಹೇಶ್ ಆಚಾರ್, ಪುಷ್ಪ, ಸಂಧ್ಯಾ, ಸುಧಾ, ಚಂದ್ರಾವತಿ, ಸುಧಾನಾರಾಯಣ್ ಅಚಾರ್, ಶ್ರೀನಿವಾಸ್, ರಾಜಶೇಜರ್ ಇದ್ದರು.
ತನು ಕೊಟ್ಟಿಗೆಹಾರ, ವರದಿಗಾರರು.

0 Comments