ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶ್ರೀಗಂಧ ಮರದ ಕುರಿತಾಗಿ ಮಾಹಿತಿ ಹಾಗೂ ಮರವನ್ನು ಮಲೆನಾಡು ಭಾಗದಲ್ಲಿ ಬೆಳೆಯುವ ಕುರಿತಾಗಿ ಶೃಂಗೇರಿಯಲ್ಲಿ ಇಂದು ಕಾರ್ಯಾಗಾರ ನಡೆಯಿತು.
ಈ ಕಾರ್ಯಕ್ರಮವನ್ನು ರಜಿತ್ ಗೌಡ ಬೇಸೂರ್ ಅವರು ಆಯೋಜನೆ ಮಾಡಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾಕ್ಟರ್ ಸುಂದರ್ ಗೌಡ, ಟಿಸಿ ರಾಜೇಂದ್ರ ಆಗಮಿಸಿದ್ದರು.
ಶ್ರೀಗಂಧ ವೇದಿಕೆ ಶೃಂಗೇರಿ ಒಕ್ಕೂಟದ ವತಿಯಿಂದ ನಡೆದ ಶ್ರೀಗಂಧದ ಬಗ್ಗೆ ಮಾಹಿತಿ ಮತ್ತು ಬೆಳೆಯುವ ವಿಧಾನದ ಕುರಿತು ಮಾಹಿತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾಕ್ಟರ್ ಸುಂದರ್ ಗೌಡ ಅವರು ಮಾತನಾಡಿ ಮಲೆನಾಡಿನಲ್ಲಿ ಅಡಿಕೆಗೆ ರೋಗ ಬಂದು ಅದಕ್ಕೆ ಪರ್ಯಾಯ ಬೆಳೆಯಾಗಿ ಶ್ರೀಗಂಧವನ್ನು ರೈತರು ಬೆಳೆಯುದರಿಂದ ಹೆಚ್ಚಿನ ಲಾಭಗಳಿಸಬಹುದೆಂದು ತಿಳಿಸಿದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಟಿ. ಸಿ ರಾಜೇಂದ್ರ ಅವರು ಮಾತನಾಡಿ ಶ್ರೀಗಂಧದ ಬೀಡಾಗಿದ್ದ ನಮ್ಮ ಶೃಂಗೇರಿಯಲ್ಲಿ ಕಳ್ಳಸಾಗಣೆ ಕಾರಣ ಅವನತಿಯತ್ತ ಸಾಗುತ್ತಿದೆ. ಅದನ್ನು ಮನಗಂಡು ರೈತರು ತಮ್ಮ ಜಮೀನಿನಲ್ಲಿ ಕೃಷಿ ಬೆಳೆಯಾಗಿ ಶ್ರೀಗಂಧ ಬೆಳೆಸಿ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಇದೆ ಎಂದರು. ಮತ್ತು ರೈತರಿಗೆ ಅದನ್ನು ಬೆಳೆಯುವ ವಿಧಾನದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮ ಆಯೋಜಕರಾದ ರಜಿತ್ ಗೌಡ ಬೇಸೂರ್ ಅವರು ಮಾತನಾಡಿ ಪ್ರಸ್ತುತ ಮಲೆನಾಡಿನಲ್ಲಿ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿರುವ ಈ ಸಂದರ್ಭದಲ್ಲಿ ಶ್ರೀಗಂಧ ಬೆಳೆಯುವ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು ಮತ್ತು ಮಲೆನಾಡಿನಲ್ಲಿ ಹೆಚ್ಚನ ಸಂಖ್ಯೆಯಲ್ಲಿ ಕೃಷಿಕರು ಇರುವುದರಿಂದ ಮತ್ತು ಇಲ್ಲಿ ಶ್ರೀಗಂಧ ಬೆಳೆಯಲು ಕೃಷಿ ಭೂಮಿ ಯೋಗ್ಯವಾಗಿರುವುದರಿಂದ ರೈತರಿಗೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಮುಂದಿನ ದಿನಗಳಲ್ಲಿ ಶ್ರೀಗಂಧದ ಗಿಡಗಳನ್ನು ರೈತರಿಗೆ ತಲುಪಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.
ಈ ಕಾರ್ಯಾಗಾರಕ್ಕೆ ಆಗಮಿಸಿದ ರೈತರು ಶ್ರೀಗಂಧದ ಮರದ ಕುರಿತಾಗಿ ಹಾಗೂ ಅದನ್ನು ಬೆಳೆಯುವ ವಿಧಾನದ ಮಾಹಿತಿಯನ್ನು ಪಡೆದುಕೊಂಡು ಕಾರ್ಯಗಾರದ ಪ್ರಯೋಜನವನ್ನು ಪಡೆದುಕೊಂಡರು ಹಾಗೂ ತಮ್ಮಲ್ಲಿದ್ದ ಗೊಂದಲವನ್ನು ಪರಿಹರಿಸಿಕೊಂಡರು.

0 Comments