ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯಲ್ಲಿ ಬೆಳ್ಳಂಬೆಳಗ್ಗೆ ರಸ್ತೆ ಅಪಘಾತವಾಗಿದ್ದು. ಸ್ಕೂಟಿ ಹಾಗೂ ಆಟೋ ನಡುವೆ ಈ ಅಪಘಾತ ಸಂಭವಿಸಿದ್ದು ಸ್ಕೂಟಿಯಲ್ಲಿ ಇದ್ದವರಿಗೆ ತೀವ್ರ ಗಾಯಗಳಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಜಗದ್ಗುರು ಶ್ರೀ ಭಾರತೀ ತೀರ್ಥ ಸರ್ಕಲ್ (ತೆಕ್ಕೂರ್ ಸರ್ಕಲ್) ನಲ್ಲಿ ಇಂದು ಬೆಳಗ್ಗಿನ ಸಮಯದಲ್ಲಿ ಆಟೋ ಹಾಗೂ ಸ್ಕೂಟಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಎರಡೂ ವಾಹನಗಳಲ್ಲಿ ಇದ್ದ ಸವಾರರಿಗೆ ಪೆಟ್ಟಾಗಿದ್ದು ಶೃಂಗೇರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ರೀತಿಯ ಅಪಘಾತಗಳು ಇದೇ ಮೊದಲಲ್ಲ, ಇಲ್ಲಿ ಸಾವುಗಳು ಸಹ ಸಂಭವಿಸಿದೆ. ಬಹಳಷ್ಟು ಬಾರಿ ಭಾರತೀತೀರ್ಥ ಸರ್ಕಲ್ನಲ್ಲಿ ಭೀಕರವಾದ ಅಪಘಾತಗಳು ಸಂಭವಿಸಿದೆ. ಇದು ಬೈಪಾಸ್ ರಸ್ತೆಯಾಗಿದ್ದು ಮುಖ್ಯವಾಗಿ ವಾಹನ ಸವಾರರಿಗೆ ಎಚ್ಚರಿಕೆ ನೀಡುವ ಅಥವಾ ಸಂದೇಶಗಳನ್ನು ನೀಡುವ ಯಾವುದೇ ಬೋರ್ಡ್ ಗಳು ಇಲ್ಲಿ ಕಾಣ ಸಿಗುವುದಿಲ್ಲ. ಸುಸಜ್ಜಿತವಾದ ರಸ್ತೆ ಇದೆಯೇ ಹೊರತು ಉಳಿದಂತೆ ಮಾಹಿತಿ ನೀಡುವ ಯಾವುದೇ ಫಲಕಗಳು, ಬ್ಯಾರಿಕೇಡ್ ಅಥವಾ ಮಾರ್ಗಸೂಚಿ ಬೋರ್ಡ್ ಗಳು ಈ ರಸ್ತೆಯಲ್ಲಿ ಕಾಣಸಿಗುವುದಿಲ್ಲ. ಈ ಮೊದಲು ಇಲ್ಲಿ ಹಂಪ್ಸ್ ಗಳು ಇದ್ದವು ಆದರೆ ಆಗ ವಾಹನಗಳು ನಿಧಾನಗತಿಯಿಂದ ವೃತ್ತದ ಸಮೀಪ ಚಲಿಸುತ್ತಿದ್ದವು ಆದರೆ ಕಳೆದ ಒಂದು ವರ್ಷದಿಂದ ಹಂಪ್ ಸಹ ಇರುವುದಿಲ್ಲ. ಶೃಂಗೇರಿ ಹಾಗೂ ಚಿಕ್ಕಮಗಳೂರು ಮಾರ್ಗದ ರಸ್ತೆಯಲ್ಲಿ ವಾಹನಗಳು ತೀವ್ರ ವೇಗವಾಗಿ ಚಲಿಸುವುದರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ.
ಎಷ್ಟೇ ಅಪಘಾತಗಳು ಈ ಸರ್ಕಲ್ ನಲ್ಲಿ ಉಂಟಾದರೂ ಕೂಡ ಈ ಕುರಿತಾಗಿ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಕುರಿತು ಗಮನ ಹರಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

0 Comments