ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಹಲವು ಕಡೆಗಳಲ್ಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹ ಮಾಡಿದ್ದ ಹಾಗೂ ಸಾಗಾಟ ನಡೆಸುತ್ತಿದ್ದ ಮದ್ಯವನ್ನು ವಶ ಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕೆರೆಕೋಡಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಂಪೂರ್ಣ ಅಕ್ರಮವಾಗಿ ಮದ್ಯವನ್ನು ಸಂಗ್ರಹಿಸಿಟ್ಟ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದು ಸ್ಥಳದಲ್ಲಿದ್ದ 22,750 ರೂ ಮೌಲ್ಯದ 58.5 ಲೀಟರ್ ಮಧ್ಯವನ್ನು ಕಡೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆಯು ಕಡೂರು ಪಿಎಸೈ ನೇತೃತ್ವದಲ್ಲಿ ಕಡೂರಿನ ಪೊಲೀಸ್ ಠಾಣಾ ಸಿಬ್ಬಂದಿಗಳೊಂದಿಗೆ ಯಶಸ್ವಿಯಾಗಿ ನಡೆದಿದೆ.
ಸಂಗಮೇಶ್ವರ ಪೇಟೆಯಲ್ಲಿ ಬೈಕ್ ನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಾಳೆಹೊನ್ನೂರು ಪೊಲೀಸರು ಮದ್ಯದ ಸಮೇತ ಬಂಧಿಸಿದ್ದಾರೆ.
ಹೆಚ್ಚಿನ ಬೆಲೆಗೆ ಮಾರಾಟ ನಡೆಸಲೆಂದು ಮದ್ಯವನ್ನು ಖರೀದಿಸಿ ಬೇರೆಡೆಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಬಾಳೆಹೊನ್ನೂರಿನ ಪಿಎಸ್ಐ ನೇತೃತ್ವದ ತಂಡವು ಸಂಗಮೇಶ್ವರ ಪೇಟೆಯಲ್ಲಿ ಮದ್ಯ ಸಾಗಾಟ ನಡೆಸುತ್ತಿದ್ದ ಬೈಕನ್ನು ತಡೆದು ವಿಚಾರಣೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಅಕ್ರಮವಾಗಿ ಹೆಚ್ಚು ಬೆಲೆಗೆ ಮಾರಾಟ ನಡೆಸಲೆಂದು ಕೊಂಡೊಯ್ಯುತ್ತಿದ್ದ ಮದ್ಯವನ್ನು ಆರೋಪಿಗಳ ಸಮೇತ ಪೊಲೀಸರು ವಶಪಡೆದುಕೊಂಡಿದ್ದಾರೆ. ಬಂಧಿತರಿಂದ ಹತ್ತು ಸಾವಿರ ರೂಪಾಯಿ ಮೌಲ್ಯದ 288 ಮಧ್ಯದ ಪೌಚ್ ಹಾಗೂ ಸಾಗಾಟ ನಡೆಸುತ್ತಿದ್ದ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಬಾಳೆಹೊನ್ನೂರು ಪೊಲೀಸ್ ಠಾಣೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

0 Comments