ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಒಂದೆಡೆ ಮಳೆಗೆ ಮಲೆನಾಡು ತತ್ತರಿಸಿ ಹೋಗಿದ್ದರೆ, ಇನ್ನೊಂದೆಡೆ ಮಳೆಯಿಂದಾಗಿ ಹಲವು ಅವಘಡಗಳು ಸಂಭವಿಸುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಕೆಲವು ದಿನಗಳ ಹಿಂದೆ ಭಾರೀ ಮಳೆಯಿಂದಾಗಿ ಹಳ್ಳದ ನೀರು ಹರಿಯುವ ರಭಸಕ್ಕೆ ಪೊನ್ನಸ್ವಾಮಿ ಎಂಬ 45 ವರ್ಷದ ವ್ಯಕ್ತಿಯೋರ್ವ ಕೊಚ್ಚಿ ಹೋಗಿದ್ದ, ಅವರ ಹುಡುಕಾಟವನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ನಡೆಸುತ್ತಿದ್ದರು.

ಪೊನ್ನ ಸ್ವಾಮಿ ಅವರು ಲಿಂಗದಹಳ್ಳಿಯಿಂದ ಸಿದ್ಧರಹಳ್ಳಿಗೆ ಹೋಗುವ ಸಂದರ್ಭದಲ್ಲಿ ಹುಲಿ ತಿಮ್ಮಾಪುರದ ಹಳ್ಳದ ಕಿರು ಸೇತುವೆ ಮೇಲೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಇಂದು ಬೆಳಗ್ಗೆ ಅಗ್ನಿಶಾಮಕ ಸಿಬ್ಬಂದಿಗಳಿಗೆ ವ್ಯಕ್ತಿಯ ಶವ ದೊರೆತಿದೆ. ಕೊಚ್ಚಿ ಹೋದ ಸ್ಥಳದಿಂದ ನೂರು ಮೀಟರ್ ಅಂತರದಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಗೂ ಸ್ಥಳೀಯರು ಕೂಡ ಕಾರ್ಯಾಚರಣೆ ನಡೆಸಲು ಸಹಕಾರ ನೀಡಿದ್ದಾರೆ. ಘಟನೆಯ ಕುರಿತಾಗಿ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನು ಕೊಟ್ಟಿಗೆಹಾರ, ವರದಿಗಾರರು.