ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಯೂತ್ ಕಾಂಗ್ರೆಸ್ ಅಧ್ಯಕ್ಷ ನೋರ್ವ ಬಜರಂಗದಳದಲ್ಲಿ ಸಕ್ರಿಯವಾಗಿ ತೊಡಗಿಕೊಂಡ ಕಾರಣಕ್ಕಾಗಿ ಯೂತ್ ಕಾಂಗ್ರೆಸ್ ನಿಂದ ಅಮಾನತು ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಬೇಳೂರು ಅವರು ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಆರೋಪಿಸಿ ಈ ನಿರ್ಣಯ ತೆಗೆದುಕೊಂಡಿರುವುದಾಗಿ ಕಾಂಗ್ರೆಸ್ ಪಕ್ಷ ತಿಳಿಸಿದೆ.

ನಾನು ಪುನೀತ್ ರಾಜಕುಮಾರ್ ಅವರ ಅಭಿಮಾನಿ, ಅವರ ಹೆಸರಿನ ಅಡಿಯಲ್ಲಿ ನಡೆದ ರಕ್ತದಾನ ಕಾರ್ಯಕ್ರಮದಲ್ಲಿ ನನ್ನ ಹಿತೈಷಿಗಳ ಜೊತೆಗೆ ಭಾಗಿಯಾಗಿದ್ದೆ. ಕೇಸರಿ ಶಲ್ಯ ಯಾವುದೋ ಒಂದು ಪಕ್ಷ ಅಥವಾ ಸಂಘಟನೆ ಗುತ್ತಿಗೆ ಪಡೆದಿಲ್ಲ. ನೊಟೀಸ್ ಕೂಡ ನೀಡದೆ ಈ ಬೆಳವಣಿಗೆ ನಡೆದಿರುವುದು ಬೇಸರತಂದಿದೆ. ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರೆಯುತ್ತೇನೆ. - ಅಶೋಕ್ ಬೇಲೂರು. ಗ್ರಾಮ ಪಂಚಾಯತ್ ಸದಸ್ಯ.

ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕೋಮುವಾದಿ ಸಂಘಟನೆಯಾಗಿದೆ ಅದರಲ್ಲಿ ಪಾಲ್ಗೊಂಡಿರುವುದು ಪಕ್ಷ ವಿರೋಧಿ ಚಟುವಟಿಕೆಯಾಗಿದೆ ಎಂದು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಕ್ಷಾ ರಾಮಯ್ಯ ಅವರ ಆದೇಶದ ಮೇರೆಗೆ ಸಾಗರ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.