ಕೊಡಗು :(ನ್ಯೂಸ್ ಮಲ್ನಾಡ್ ವರದಿ) ಕೊಡವ ಸಂಪ್ರದಾಯವನ್ನು ಉಳಿಸುವ ಸಲುವಾಗಿ ಕೊಡಗಿನ ಪೊನ್ನಂಪೇಟೆ ಕೊಡವ ಸಮಾಜವು ಹಲವು ನಿಯಮಾವಳಿಗಳನ್ನು ಜಾರಿಗೊಳಿಸಿದೆ.
ನಿಯಮಾವಳಿ ರಚಿಸಲು ಕಾರಣಗಳೇನು ?
ಕೊಡವರ ಸಂಸ್ಕೃತಿಯಲ್ಲಿ ಮಹಿಳೆಯರು ಕೂದಲು ಕಟ್ಟಿದ್ದನ್ನು ಬಿಚ್ಚಿಕೊಳ್ಳುವುದು ಕೇವಲ ಸಾವಿನ ಮನೆಯಲ್ಲಿ ಮಾತ್ರ, ಆದರೆ ಇತ್ತೀಚಿನ ದಿನಗಳಲ್ಲಿ ಮದುವೆಗೆ ಬರುವ ಮಹಿಳೆಯರು ಕೂಡ ಕೂದಲನ್ನು ಬಿಚ್ಚಿಕೊಂಡು ಓಡಾಡುತ್ತಿದ್ದರೆ ಇದು ಸಂಸ್ಕೃತಿಗೆ ವಿರುದ್ಧವಾಗಿದೆ ಆದ ಕಾರಣ ಪೊನ್ನಂಪೇಟೆ ಕೊಡವ ಸಮಾಜ ನಿಯಮಾವಳಿಗಳನ್ನು ರಚಿಸಿದೆ ಎಂದು ತಿಳಿದುಬಂದಿದೆ.
ಇದಲ್ಲದೆ ಕೊಡವರ ಪದ್ಧತಿಯ ಪ್ರಕಾರ ಮದುವೆಯ ಸಂದರ್ಭದಲ್ಲಿ ಮದುಮಗನು ಸಂಪೂರ್ಣವಾಗಿ ಗಡ್ಡವನ್ನು ತೆಗೆದಿರಬೇಕು ಎಂಬ ನಿಯಮವಿದೆ. ಇದು ಪದ್ಧತಿಯೂ ಹೌದು. ಆದರೆ ಪ್ರಸ್ತುತ ನಡೆಯುತ್ತಿರುವ ಮದುವೆಗಳಲ್ಲಿ ಮದುಮಗನು ಮದುವೆಯ ಸಂದರ್ಭದಲ್ಲಿ ಗಡ್ಡ ಬಿಡುವುದು ಫ್ಯಾಶನ್ ಆಗಿದೆ. ಫ್ಯಾಶನ್ ಶುರುವಾಗಲು ಹೋಗಿ ನಮ್ಮ ಸಂಪ್ರದಾಯವು ಮರೆಯಾಗುತ್ತಿದೆ ಎಂದು ಪೊನ್ನಂಪೇಟೆ ಕೊಡವ ಸಮಾಜ ಹೇಳಿದೆ.
ಮದುವೆಯ ಶುಭ ಸಂದರ್ಭದಲ್ಲಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುವ ಕೆಲವರು ಕೇಕ್ ಕಟ್ ಮಾಡಿ ವಿಭಿನ್ನವಾಗಿ ಮದುವೆಯ ಆಚರಣೆ ಮಾಡುತ್ತಿದ್ದಾರೆ, ಇದು ಸಂಸ್ಕೃತಿಯ ವಿರುದ್ಧವಾದ ಆಚರಣೆ ಆಗಿದೆ, ಇವುಗಳನ್ನೆಲ್ಲ ತಡೆಗಟ್ಟುವ ಹಿನ್ನೆಲೆಯಲ್ಲಿ ಪೊನ್ನಂಪೇಟೆ ಕೊಡವ ಸಮಾಜವು ಈ ನಿರ್ಣಯಗಳನ್ನು ಕೈಗೊಂಡಿದೆ ಎಂದು ಹೇಳಿದೆ.
ತಲತಲಾಂತರಗಳಿಂದ ಬಂದ ಕೊಡವ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕಲಿಸುವುದೇ ನಮ್ಮ ಮುಖ್ಯ ಉದ್ದೇಶ :
ಈಗಿನ ತಲೆಮಾರಿಗೆ ಕೊಡವರ ಆಚಾರ ವಿಚಾರಗಳನ್ನು ಸಂಪೂರ್ಣವಾಗಿ ಹೇಳಿಕೊಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಹಾಗಾಗಿ ಪಾಶ್ಚಾತ್ಯ ಸಂಸ್ಕೃತಿಗೆ ಆಕರ್ಷಿತರಾಗಿರುವ ಕೊಡವರನ್ನು ಪುನಃ ಶಿಸ್ತುಬದ್ಧವಾಗಿ ಕರೆತರುವ ಉದ್ದೇಶದಿಂದ ಈ ನಿಬಂಧನೆಗಳನ್ನು ಹಾಕಲಾಗಿದೆ ಎಂದು ಪೊನ್ನಂಪೇಟೆ ಕೊಡವ ಸಮಾಜ ಹೇಳಿದೆ.
ನಿಯಮಾವಳಿಗಳಿಗೆ ವಿರೋಧ ವ್ಯಕ್ತಪಡಿಸಿದ ಪ್ರಗತಿಪರರು : ಕೊಡವರ ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ಪೊನ್ನಂಪೇಟೆ ಕೊಡವ ಸಮಾಜದ ಪಾತ್ರ ಏನು ಇಲ್ಲ, ಅಂತಹುದರಲ್ಲಿ ನಿಯಮಾವಳಿಗಳನ್ನು ಪೊನ್ನಂಪೇಟೆ ಕೊಡವ ಸಮಾಜ ರಚಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹಲವು ಪ್ರಗತಿಪರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪದ್ಧತಿಯ ಪ್ರಕಾರ ನೋಡುವುದಾದರೆ ಕೊಡವರು ಮದುವೆ ಮಂಟಪಗಳಲ್ಲಿ ವಿವಾಹ ಆಗುವಂತೆಯೆ ಇಲ್ಲ. ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾವಣೆ ಆಗುತ್ತದೆ ಅದು ಸಹಜ ಕ್ರಿಯೆ ಕೂಡ ಹೌದು ಎಂದು ಸಮಜಾಯಿಷಿ ನೀಡಿದ್ದಾರೆ.
ಒಟ್ಟಿನಲ್ಲಿ ಈ ವಿಚಾರದ ಕುರಿತಾಗಿ ಪರ ಹಾಗೂ ವಿರೋಧದ ವ್ಯಾಪಕ ಚರ್ಚೆಯು ಎಲ್ಲೆಡೆ ನಡೆಯುತ್ತಿದ್ದು ಕೆಲವರು ಸಮಜಾಯಿಷಿ ನೀಡಿದರೆ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

0 Comments