ಮೂಡಿಗೆರೆ : ಬಾರ್ ಒಂದರ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಪ್ರಕರಣವೊಂದು ಬಣಕಲ್ ಪಟ್ಟಣದಲ್ಲಿ ನಡೆದಿದೆ. 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪಟ್ಟಣದಲ್ಲಿರುವ ಬಾರ್ ಒಂದರ ಬೀಗ ಮುರಿದು ಕಳ್ಳರು ಕಳ್ಳತನಕ್ಕೆ ಯತ್ನಿಸಿದ್ದಾರೆ. ಬಣಕಲ್ ಸಂಭ್ರಮ್ ಬಾರ್ ನಲ್ಲಿ ಈ ಘಟನೆ ನಡೆದಿದೆ. ಬಾರ್ ನ ಮುಂಬಾಗಿಲ ಬೀಗ ಮುರಿದು ಕಳ್ಳರು ಬಾರ್ ದೋಚಲು ಯತ್ನಿಸಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. 

ಬೆಳಗ್ಗಿನ ಜಾವ 3.30 ಸಮಯದಲ್ಲಿ ಲಗ್ಗೆಇಟ್ಟ ಕಳ್ಳರು ಬಾರ್ ನಲ್ಲಿ ಹಣ ದೊರೆಯದೆ ಮದ್ಯವನ್ನು ಮುಟ್ಟದೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಘಟನೆಯ ಕುರಿತಾಗಿ ಮೂಡಿಗೆರೆಯ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. 

ಜಿಲ್ಲೆಯ ಹಲವೆಡೆಗಳಲ್ಲಿ ಈ ರೀತಿಯಾದ ಕಳ್ಳತನದ ಪ್ರಕರಣಗಳು ಹೆಚ್ಚಿದ್ದು ಇಲಾಖೆಯ ಅಧಿಕಾರಿಗಳು ಕೂಡ ಕಳ್ಳರನ್ನು ಸೆರೆ ಹಿಡಿಯುವಲ್ಲಿ ಪ್ರಯತ್ನಿಸುತ್ತಿದ್ದಾರೆ, ಹಲವೆಡೆಗಳಲ್ಲಿ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತನು ಕೊಟ್ಟಿಗೆಹಾರ, ವರದಿಗಾರರು.