ಚಿಕ್ಕಮಗಳೂರು : ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ಊರಿಗೆ ಬಾರ್ ಬೇಡ ಎಂಬ ದೊಡ್ಡ ಮಟ್ಟದ ಕೂಗು ಕೇಳಿತ್ತು ಹಾಗೂ ನಂತರದ ದಿನಗಳಲ್ಲಿ ಪರಿಸ್ಥಿತಿಯು ಇನ್ನಷ್ಟು ಬಿಗಡಾಯಿಸಿತ್ತು. ಪ್ರಸ್ತುತ ಮುಸ್ಲಾಪುರ ಗ್ರಾಮದಲ್ಲಿ ಇನ್ನಷ್ಟು ಗೊಂದಲಗಳು ಸೃಷ್ಟಿಯಾಗಿದೆ.
ಘಟನೆಯ ಹಿನ್ನೆಲೆ :
ಕೆಲ ತಿಂಗಳುಗಳ ಹಿಂದೆ ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ನೂತನವಾಗಿ ಬಾರ್ ತೆರೆಯುತ್ತದೆ ಎಂದು ಕಂಡು ಬಂದ ನಂತರದಲ್ಲಿ ಗ್ರಾಮದ ಮಹಿಳೆಯರು,ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಾರ್ ನ ವಿರುದ್ಧವಾಗಿ ತೀವ್ರ ಪ್ರತಿಭಟನೆ ನಡೆಸಿದ್ದರು ಹಾಗೂ ಬಾರ್ ತೆರೆಯದಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಇಷ್ಟಾದರೂ ಕೂಡ ಕೆಲ ದಿನಗಳು ಕಳೆದ ನಂತರದಲ್ಲಿ ಬಾರ್ ತೆರೆದು ವ್ಯಾಪಾರ ಆರಂಭವಾಗಿತ್ತು ಇದನ್ನು ಕಂಡು ಆಕ್ರೋಶಗೊಂಡ ಗ್ರಾಮಸ್ಥರು ಬಾರ್ ಮುಂದೆಯೇ ಧರಣಿ ನಡೆಸಿದರು ಹಾಗೂ ಬಾರ್ ಒಳಗೆ ನುಗ್ಗಿ ಅಲ್ಲಿನ ಕೆಲವು ವಸ್ತುಗಳನ್ನು ಹಾನಿ ಮಾಡಿದ್ದರು. ನಂತರದಲ್ಲಿ ಸ್ಥಳೀಯ ಶಾಸಕರು ಹಾಗೂ ಜನ ಪ್ರತಿನಿಧಿಗಳು ಘಟನಾ ಸ್ಥಳಕ್ಕೆ ತೆರಳಿ ಜನರ ಮನವೊಲಿಸುವ ಕೆಲಸ ಮಾಡಿದ್ದರು. ಈ ಕುರಿತಾಗಿ ಎರಡು ಕಡೆಯಿಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮುಂಜಾನೆ ಏಕಾಏಕಿ ಮನೆಗೆ ನುಗ್ಗಿದ ಪೊಲೀಸರು :
ಇಂದು ಮುಂಜಾನೆ ಪೊಲೀಸರು ಮುಸ್ಲಾಪುರದ ಕೆಲ ಮನೆಗಳಿಗೆ ನುಗ್ಗಿ ಬಾಗಿಲು ಹಾಗೂ ಮನೆಯ ಕೆಲ ಸಾಮಾಗ್ರಿಗಳನ್ನು ಧ್ವಂಸ ಗೊಳಿಸಿದ್ದಾರೆ ಹಾಗೂ ಮನೆಯ ಬಾಗಿಲು ಹಾಗೂ ಹೆಂಚುಗಳನ್ನು ಪುಡಿ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿರುವ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮೊನ್ನೆ ನಡೆದ ಘಟನೆಯಲ್ಲಿ ಬಾರ್ ಧ್ವಂಸ ಮಾಡಿದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲು ಇಂದು ಮಸ್ಲಾಪುರಕ್ಕೆ ನಮ್ಮ ಸಿಬ್ಬಂದಿಗಳೊಂದಿಗೆ ತೆರಳಿದ್ದೆವು. ಹಂಚು ಒಡೆದು ಮನೆಯ ವಸ್ತುಗಳನ್ನು ದ್ವಂಸ ಮಾಡಿರುವುದು ಸುಳ್ಳು ಆರೋಪವಾಗಿದೆ. ಆರೋಪಿಗಳ ತನಿಖೆ ನಡೆಯುತ್ತಿದೆ. -ರಮ್ಯ ಪಿ.ಎಸ್.ಐ ಕಡೂರು.
ಘಟನೆಯ ಕುರಿತು ಆರೋಪ ಪ್ರತ್ಯಾರೋಪಗಳು ನಡೆಯುತ್ತಲಿದ್ದು ಸಂಪೂರ್ಣ ಕೂಲಂಕುಷ ತನಿಖೆಯ ನಂತರದಲ್ಲಿ ಈ ಕುರಿತಾದ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.
ತನು ಕೊಟ್ಟಿಗೆಹಾರ, ವರದಿಗಾರರು.

0 Comments