ಹಾಸನ : (ನ್ಯೂಸ್ ಮಲ್ನಾಡ್ ವರದಿ) ಎರಡು ತಿಂಗಳ ಹಿಂದೆ ಉದ್ಯಮಿಯೊಬ್ಬರ ಮನೆಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಹಾಸನದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಸೆ.07 ರಂದು ದರೋಡೆ ನಡೆದಿತ್ತು, ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿ ಹಾಗೂ ಹಣವನ್ನು ಕೇವಲ ಏಳರಿಂದ ಎಂಟು ನಿಮಿಷಗಳ ಒಳಗೆ ಸಿನಿಮೀಯ ರೀತಿಯಲ್ಲಿ ದೋಚಿದ ಕಳ್ಳರು ಅಲ್ಲಿಂದ ಪರಾರಿಯಾಗಿದ್ದರು. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.
ಚೆಕ್ ಪೋಸ್ಟ್ನಲ್ಲಿ ವಾಹನ ತಪಾಸಣೆ ವೇಳೆ ಸಿಕ್ಕಿಬಿದ್ದ ಖದೀಮರು :
ಹಳೇಬೀಡು ಹಾಗೂ ಜಾವಗಲ್ ರಸ್ತೆಯ ಬಳಿಯಲ್ಲಿ ಸಿಪಿಐ ಶ್ರೀಕಾಂತ್ ಹಾಗೂ ಸಿಬ್ಬಂದಿವರ್ಗ ನಡೆಸುತ್ತಿದ್ದ ವಾಹನ ತಪಾಸಣೆಯಲ್ಲಿ ಅನುಮಾನಾಸ್ಪದವಾಗಿ ಕಂಡ ಕಾರಿನಲ್ಲಿದ್ದ ಇಬ್ಬರನ್ನು ಪೊಲೀಸರು ಪ್ರಶ್ನೆ ಮಾಡಿ, ಕಾರನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದಾಗ ಕಾರಿನಲ್ಲಿ ಸಾಗಿಸುತ್ತಿದ್ದ ಚಿನ್ನಾಭರಣಗಳು ಹಾಗೂ ಹಣ ಪತ್ತೆಯಾಗಿದೆ. ಪೊಲೀಸರ ಪ್ರಶ್ನೆಗೆ ಸೂಕ್ತವಾಗಿ ಉತ್ತರಿಸದೆ ತಪ್ಪಿಸಿಕೊಳ್ಳಲು ಯತ್ನ ನಡೆಸಿದಾಗ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಬಂಧಿತರು ಚಿಕ್ಕಮಗಳೂರು ಜಿಲ್ಲೆಯ ಕಡೂರು ಸಮೀಪದ ಮಹಮದ್ ಖಾಲಿದ್ ಹಾಗೂ ಇನ್ನೋರ್ವ ಆತನ ಗೆಳೆಯ ಎಂಬ ಮಾಹಿತಿ ಲಭ್ಯವಾಗಿದೆ. ಬಂಧಿತರ ಬಳಿಯಿದ್ದ ಕಾರನ್ನು ಹಾಗೂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನಿಖೆಯು ಇನ್ನೂ ನಡೆಯುತಲಿದ್ದು ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

0 Comments