ಮೂಡಿಗೆರೆ ತಾಲ್ಲೂಕಿನ ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮರ್ಕಲ್ ಗ್ರಾಮದ ಬಸ್ ನಿಲ್ದಾಣದ ಗೋಡೆಯ ಮೇಲೆ ಬರೆದಿದ್ದ ಮಂಡ್ಯ ಮೂಲದ ಸಾಗರ್ ಎಂಬ ಯುವಕನನ್ನು ಪೊಲೀಸರು ಹುಡುಕಿ ಆತನಿಂದಲೇ ಬಸ್ ನಿಲ್ದಾಣಕ್ಕೆ ಸುಣ್ಣ- ಬಣ್ಣವನ್ನು ಹೊಡಿಸಿದ್ದಾರೆ.
ಕೆಲ ದಿನಗಳ ಹಿಂದೆ ನಿಡುವಾಳೆ ಗ್ರಾಮ ಪಂಚಾಯಿತಿಯ ಸದಸ್ಯ ನವೀನ್ ಹಾವಳಿ ಎಂಬುವವರು ತನ್ನ ಸ್ವಂತ ಹಣದಿಂದ ಬಸ್ ನಿಲ್ದಾಣವನ್ನು ದುರಸ್ಥಿ ಮಾಡಿಸಿದ್ದರು.
ಆ ಬಸ್ ನಿಲ್ದಾಣದಲ್ಲಿ ಸಾಗರ್ ಎಂಬ ಯುವಕ ಮಣ್ಣಿನಿಂದ ಆತನ ಪ್ರೇಯಸಿಯ ಹೆಸರು, ಅವನ ಊರಿನ ಹೆಸರು, ಮೊಬೈಲ್ ನಂಬರ್, ಸ್ನೇಹಿತರ ಹೆಸರನ್ನು ಮನಸ್ಸಿಗೆ ತೋಚಿದ ಚಿತ್ರವನ್ನು ನಿಲ್ದಾಣದ ಇಡೀ ಗೋಡೆಯ ಮೇಲೆ ಬರೆದು ಬಸ್ ನಿಲ್ದಾಣವನ್ನು ಹಾಳು ಮಾಡಿದ್ದ. ಇದನ್ನು ಗಮನಿಸಿದ ನವೀನ್ ಹಾವಳಿ ಮತ್ತು ಗ್ರಾಮ ಪಂಚಾಯಿತಿಯ ಗ್ರಾಮಸ್ಥರು ಬಾಳೂರು ಪೊಲೀಸ್ ಠಾಣೆಗೆ ತೆರಳಿ ದೂರನ್ನು ನೀಡಿದ್ದರು, ದೂರನ್ನು ದಾಖಲಿಸಿಕೊಂಡ ಪೊಲೀಸರು ಆ ಯುವಕನನ್ನು ಹುಡುಕಿ ಅಲ್ಲಿಗೆ ಕರೆತಂದು ಆತನ ಕೈ ನಿಂದಲೇ ಬಸ್ ನಿಲ್ದಾಣಕ್ಕೆ ಬಣ್ಣವನ್ನು ಹೊಡೆಸಿದ್ದಾರೆ.
ನಿಲ್ದಾಣವನ್ನು ಹಾಳು ಮಾಡಿದ್ದ ಮಂಡ್ಯದ ಯುವಕನನ್ನು ಹುಡುಕಿ ಕರೆತಂದು ಬಸ್ ನಿಲ್ದಾಣಕ್ಕೆ ಮೊದಲಿನ ಹಾಗೆ ರೂಪವನ್ನು ಕೊಡಿಸಿದ ಬಾಳೂರು ಪೊಲೀಸ್ ಪಿ.ಎಸ್.ಐ ರೇಣುಕಾ ಹಾಗೂ ಠಾಣೆಯ ಸಿಬ್ಬಂದಿಗಳಾದ ಮಹೇಶ್, ಹೇಮಂತ್, ಸತೀಶ್ ರವರಿಗೆ ನಿಡುವಾಳೆಯ ಗ್ರಾಮಸ್ಥರು ಅಭಿನಂದನೆಯನ್ನು ಸಲ್ಲಿಸಿದ್ದರು.

0 Comments