ಶೃಂಗೇರಿ :(ನ್ಯೂಸ್ ಮಲ್ನಾಡ್ ವರದಿ) ದಿನನಿತ್ಯ ಪ್ರಯಾಣಿಕರಿದ್ದರೂ ಸಹ ಅಗತ್ಯವಿರುವ ಕಡೆ ಕೆಎಸ್ಸಾರ್ಟಿಸಿ ಬಸ್ ಬಿಡಲು ಹಿಂದೇಟು ಹಾಕುತ್ತಿರುವ ಆರೋಪ ಕೇಳಿಬಂದಿವೆ.
ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಬಸ್ ಸಂಚಾರ ಸೇರಿದಂತೆ ಎಲ್ಲವೂ ಸ್ಥಗಿತಗೊಂಡಿದ್ದವು ಆದರೆ ಅನ್ ಲಾಕ್ ಆದ ಬಳಿಕ ಸಹಜ ಸ್ಥಿತಿಗೆ ಮರಳಿ ವರ್ಷ ಸಮೀಪಿಸುತ್ತಿದ್ದರು ಸಮರ್ಪಕವಾಗಿ ಬಸ್ ಸೌಲಭ್ಯ ಒದಗಿಸಲು ಕೆಎಸ್ಸಾರ್ಟಿಸಿ ಹಿಂದೇಟು ಹಾಕುತ್ತಿದೆ. ಬೆಳಿಗ್ಗೆ 9 ಗಂಟೆಗೆ ಶೃಂಗೇರಿಯಿಂದ ಶಿವಮೊಗ್ಗಕ್ಕೆ ಈ ಹಿಂದೆ ಸರ್ಕಾರಿ ಬಸ್ ಇತ್ತು. ಆದರೆ ಈಗ ಆ ಬಸ್ ಬರದೆ ಹಲವಾರು ತಿಂಗಳುಗಳೇ ಕಳೆದಿವೆ, ಇತ್ತ ಪ್ರಯಾಣಿಕರಿಂದ ದೂರು ಬರುತ್ತಿದ್ದರೂ ಕೆಎಸ್ಸಾರ್ಟಿಸಿ ನಿರ್ಲಕ್ಷ್ಯ ತೋರುತ್ತಿವೆ ಎಂಬ ಆರೋಪಗಳು ಕೇಳಿ ಬಂದಿದೆ.
ಶಾಲಾ-ಕಾಲೇಜು ವಿಧ್ಯಾರ್ಥಿಗಳಿಗೆ ಸಮಸ್ಯೆ :
ಶೃಂಗೇರಿಯಿಂದ ಬೆಳಿಗ್ಗೆ 9 ಗಂಟೆಗೆ ಹರಿಹರಪುರ, ಕೊಪ್ಪ, ಎನ್ ಆರ್ ಪುರ ಮಾರ್ಗವಾಗಿ ಶಿವಮೊಗ್ಗಕ್ಕೆ ಕೆಎಸ್ಸಾರ್ಟಿಸಿ ಬಸ್ ಬಿಟ್ಟಿತ್ತು. ಈ ಹಿಂದೆ ಇದೇ ಸಮಯಕ್ಕೆ ಸಹಕಾರ ಸಾರಿಗೆ ಬಸ್ ಇತ್ತು. ಸಾರಿಗೆ ಸ್ಥಗಿತಗೊಂಡ ಬೆನ್ನಲ್ಲೇ ಆ ಸಮಯಕ್ಕೆ ಸರ್ಕಾರಿ ಬಸ್ ಬಿಡಲಾಗಿತ್ತು. ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಕಾಲೇಜಿನ ಶಿಕ್ಷಕರಿಗೆ ಇದು ಸೂಕ್ತ ಸಮಯವಾದ್ದರಿಂದ ಅವರು ಕೂಡ ಇದೇ ಬಸ್ ನಂಬಿಕೊಂಡಿದ್ದು, ಪ್ರಯಾಣಿಕರಿಗೇನು ಕೊರತೆ ಇರಲಿಲ್ಲ. ಇನ್ನು ವಿದ್ಯಾರ್ಥಿಗಳಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಜಯಪುರ-ಶೃಂಗೇರಿ ಗೆ ಬೆಳಗ್ಗೆ 8:30ಕ್ಕೆ ಬಸ್ ಬಿಟ್ಟಿದ್ದು ಈಗ ಅದನ್ನು ಕೂಡ ನಿಲ್ಲಿಸಲಾಗಿದೆ. ಬಸ್ ಇಲ್ಲದೆ ವಾರ್ಷಿಕ ಪಾಸ್ ಪಡೆದ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಸಹಕಾರ ಸಾರಿಗೆ ಸಂಸ್ಥೆಯ ಬಸ್ ಗಳು ಸ್ಥಗಿತಗೊಂಡ ಹಿನ್ನಲೆ ಪ್ರಯಾಣಿಕರು ತೊಂದರೆಗೀಡಾಗಿದ್ದರು, ಈ ಕುರಿತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ಸಹಕಾರ ಸಾರಿಗೆ ಓಡಾಡುವ ಮಾರ್ಗಗಳಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಬಿಡುವಂತೆ ಸೂಚನೆ ನೀಡಲಾಗಿದೆ. ಆದರೂ ಕೆಎಸ್ಸಾರ್ಟಿಸಿ ಬಸ್ ಬಿಡಲು ಹಿಂದೇಟು ಹಾಕುತ್ತಿದೆ. - ಟಿ.ಡಿ ರಾಜೇಗೌಡ, ಶೃಂಗೇರಿ ಶಾಸಕ
ಸರ್ಕಾರಿ ಬಸ್ ಗಿಂತ ಖಾಸಗಿ ಟಿಕೆಟ್ ದರ ದುಬಾರಿ :
ಇನ್ನು ಕೊರೋನಾ ನಂತರದಲ್ಲಿ ಖಾಸಗಿ ಬಸ್ ಗಳ ಟಿಕೆಟ್ ದರವೂ ಏರಿಕೆಯಾಗಿದ್ದು, ಕೆಎಸ್ಸಾರ್ಟಿಸಿ ಬಸ್ ಕಿಂತ ಖಾಸಗಿ ಬಸ್ ಟಿಕೆಟ್ ದರದಲ್ಲಿ ವ್ಯತ್ಯಾಸವಿದೆ. ಶೃಂಗೇರಿಯಿಂದ ಶಿವಮೊಗ್ಗಕ್ಕೆ ಕೆಎಸ್ಸಾರ್ಟಿಸಿಯಲ್ಲಿ 115 ಇದ್ದರೆ ಖಾಸಗಿ ಬಸ್ ನಲ್ಲಿ 160ರೂ., ಕೊಪ್ಪಕ್ಕೆ ಕೆಎಸ್ಸಾರ್ಟಿಸಿ ಬಸ್ ನಲ್ಲಿ 30ರೂ. ಇದ್ದರೆ, ಖಾಸಗಿ ಬಸ್ ನಲ್ಲಿ 45 ರೂ. ಇದೆ. ಇನ್ನು ಶೃಂಗೇರಿಯಿಂದ ಎನ್ ಆರ್ ಪುರಕ್ಕೆ ಕೆಎಸ್ಸಾರ್ಟಿಸಿಯಲ್ಲಿ 60 ರೂ ಇದ್ದರೆ, ಖಾಸಗಿ ಬಸ್ ನಲ್ಲಿ 85 ರೂ. ಇದೆ. ವಿದ್ಯಾರ್ಥಿಗಳಿಗೆ ವಾರ್ಷಿಕ ಪಾಸ್ ಸೌಲಭ್ಯವಿದ್ದು ಕೆಎಸ್ಸಾರ್ಟಿಸಿಯಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಸುಮಾರು 900 ರೂ. ಹಾಗೇ ಕಾಲೇಜು ವಿದ್ಯಾರ್ಥಿಗಳಿಗೆ ಸುಮಾರು 1200 ರಷ್ಟಿದೆ. ಇನ್ನು ಅನೇಕರು ಮಾಸಿಕ ಪಾಸ್ ಪಡೆಯುವವರಿದ್ದರೂ ಸಮರ್ಪಕವಾದ ಬಸ್ ಸೌಲಭ್ಯ ಇಲ್ಲದೆ ಗೊಂದಲದಲ್ಲಿದ್ದಾರೆ. ಈ ಕುರಿತು ನ್ಯೂಸ್ ಮಲ್ನಾಡ್ ಶಿವಮೊಗ್ಗ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಅವರನ್ನು ಸಂಪರ್ಕಿಸಿದಾಗ, ಲಾಕ್ ಡೌನ್ ನಂತರದಲ್ಲಿ ಈ ಮಾರ್ಗದ ಬಸ್ ಗಳು ಸ್ಥಗಿತಗೊಂಡಿದ್ದವು. ಸದ್ಯದಲ್ಲೇ ಮತ್ತೆ ಈ ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಸೂಚನೆಯಿದ್ದರೂ ಬಸ್ ಬಿಡಲು ಹಿಂದೇಟು.
ಏಷ್ಯಾದಲ್ಲೇ ಅತೀ ದೊಡ್ಡ ಸಹಕಾರಿ ಸಾರಿಗೆ ಎಂಬ ಖ್ಯಾತಿ ಪಡೆದಿದ್ದ ಸಹಕಾರ ಸಾರಿಗೆ ಕಳೆದೆರಡು ವರ್ಷದ ಹಿಂದೆ ಆರ್ಥಿಕ ಸಂಕಷ್ಟದ ಹಿನ್ನಲೆ ಬಸ್ ಸಂಚಾರ ನಿಲ್ಲಿಸಿತ್ತು. ಅದಾದ ಬಳಿಕ ಪ್ರಯಾಣಿಕರಿಗೆ ತೊಂದರೆಯಾಗುವ ಹಿನ್ನಲೆಯಲ್ಲಿ ಆ ಮಾರ್ಗಗಳಿಗೆ ಸರ್ಕಾರಿ ಬಸ್ ಬಿಡಬಹುದು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಆದೇಶ ಹೊರಡಿಸಿದ್ದರು. ಆದರೆ ಎರಡು ದಿನ ಬಿಟ್ಟು, ಈಗ ಕೈಯ ಕೊಟ್ಟು ನಮ್ಮ ಬಸ್ಸು ಕಾಣದಂತೆ ಮಾಯವಾಗಿದೆ ಎನ್ನುವುದು ಪ್ರಯಾಣಿಕರ ಅಳಲು.
ಸರ್ಕಾರಿ ಬಸ್ ನಂಬಿಕೊಂಡು ವಾರ್ಷಿಕ ಬಸ್ ಪಾಸ್ ಮಾಡಿಸಿದರೆ ಈಗ ಕೆಎಸ್ಸಾರ್ಟಿಸಿ ಬಸ್ ಬಿಡುತ್ತಿಲ್ಲ, ಇತ್ತ ಸಹಕಾರ ಸಾರಿಗೆ ಬಸ್ ಕೂಡ ಸ್ಥಗಿತಗೊಂಡಿದೆ. ಪ್ರತಿದಿನ ಕಾಲೇಜಿಗೆ ತೆರಳಲು ಪರದಾಡುವಂತಾಗಿದೆ. - ಸೀಮಿತ್, ಕಾಲೇಜು ವಿದ್ಯಾರ್ಥಿ
ಬಸ್ ಡಿಪೋ ಎಂಬ ಹುಸಿ ಭರವಸೆ :
ಇನ್ನು ಶೃಂಗೇರಿಯಲ್ಲಿ ಬಸ್ ಡಿಪೋ ನಿರ್ಮಾಣ ಮಾಡುತ್ತೇವೆಂದು ಸುಮಾರು ಐದಾರು ವರ್ಷದಿಂದ ಕಾಗಕ್ಕ ಗುಬ್ಬಕ್ಕನ ಕಥೆ ಹೇಳಿಕೊಂಡು ಬಂದಿರುವ ಜನಪ್ರತಿನಿಧಿಗಳು ಪ್ರತಿವರ್ಷ ಸುಮಾರು 40 ಲಕ್ಷ ಪ್ರವಾಸಿಗರು ಭೇಟಿ ನೀಡುವ ದೇಶದ ಪ್ರಸಿದ್ಧ ಪುಣ್ಯಸ್ಥಳ ಎನ್ನಿಸಿಕೊಂಡಿರುವ ಶೃಂಗೇರಿಗೆ ಅಗತ್ಯವಿರುವ ಬಸ್ ಡಿಪೋ ಮಾಡಿಸುವಲ್ಲಿ ವಿಫಲರಾಗಿದ್ದಾರೆ. ಪ್ರತಿ ಬಾರಿ ಮಠಕ್ಕೆ ಭೇಟಿ ನೀಡುವ ಸಚಿವರು ಶೃಂಗೇರಿ ಜನತೆಯ ಮೂಗಿಗೆ ತುಪ್ಪ ಸವರಿ ಕಾಲ್ಕೀಳುವುದು ಬಿಟ್ಟರೆ, ಸುಸಜ್ಜಿತ ಅಸ್ಪತ್ರೆ, ಬಸ್ ಡಿಪೋ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಇವರಿಂದ ಕಿಂಚಿತ್ತೂ ಉಪಕಾರವಾಗದಿರುವುದು ಬೇಸರದ ಸಂಗತಿ

0 Comments