ಹಾಸನ : (ನ್ಯೂಸ್ ಮಲ್ನಾಡ್ ವರದಿ) ಹಾಸನಾಂಬ ದೇವಿಯ ಕಾಣಿಕೆ ಹುಂಡಿ ಎಣಿಕೆಯ ವೇಳೆಗೆ ಕಾಣಿಕೆ ಹುಂಡಿಯಲ್ಲಿ ದೊರೆತ ಬೇಡಿಕೆಯ ಪತ್ರವೊಂದು ಈಗ ಬಹಳ ಚರ್ಚೆಯಲ್ಲಿದೆ.
ಹಾಸನಾಂಬ ದೇಗುಲದ ಕಾಣಿಕೆ ಹುಂಡಿಯಲ್ಲಿದ್ದ ಹಣದ ಎಣಿಕೆ ಕಾರ್ಯವು ನಿನ್ನೆಯಷ್ಟೇ ನಡೆದಿತ್ತು, ಒಟ್ಟು 1.54 ಕೋಟಿ ರೂಪಾಯಿ ಹಣವು ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ಇದರ ಮಧ್ಯೆ ತಮ್ಮ ಹಲವಾರು ಕೋರಿಕೆಗಳನ್ನು ಈಡೇರಿಸುವಂತೆ ತಾಯಿ ಹಾಸನಂಬೆಯನ್ನು ಕೋರಿದ ಭಕ್ತರು ಹಲವು ರೀತಿಯ ಪತ್ರಗಳನ್ನು ಬರೆದು ಕಾಣಿಕೆ ಹುಂಡಿಗೆ ಹಾಕಿದ್ದಾರೆ. ಅದರಲ್ಲಿ ಹೊಳೆ ನರಸೀಪುರದ ಎಂ.ಎಲ್.ಎ ಬದಲಾಗಬೇಕು ಎಂಬ ಪತ್ರವೊಂದು ಕೂಡ ದೊರೆತಿದೆ.
ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಕುಟುಂಬದ ಸದಸ್ಯರುಗಳು ಹೊಳೆ ನರಸೀಪುರದ ಜನರ ಪ್ರಾಣವನ್ನು ಹಿಂಡುತ್ತಿದ್ದಾರೆ ಆದಷ್ಟು ಬೇಗ ಅವರುಗಳು ಅಧಿಕಾರದಿಂದ ಕೆಳಗಿಳಿಯಬೇಕು, ಅವರ ಕುಟುಂಬದವರು ಅಧಿಕಾರದಿಂದ ಕೆಳಗೆ ಇಳಿದರೆ ಜನರ ಕಷ್ಟಗಳು ಸಂಪೂರ್ಣವಾಗಿ ನಶಿಸಿಹೋಗುತ್ತದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ರೇವಣ್ಣ ಅವರು, ಕೆಲವು ಕಿಡಿಗೇಡಿಗಳು ಈ ರೀತಿಯಾದ ಸುಳ್ಳು ಆರೋಪದ ಪತ್ರವನ್ನು ಬರೆದು ಹಾಕಿದ್ದಾರೆ. ಸುಳ್ಳು ಹೆಚ್ಚುದಿನ ನಡೆಯುವುದಿಲ್ಲ, ನನ್ನ ಜೀವನದಲ್ಲಿ ನಾನು ಯಾರಿಗಾದರೂ ಕಿರುಕುಳ ನೀಡಿದ್ದರೆ ದೇವಿಯೇ ನನ್ನನು ನೋಡಿಕೊಳ್ಳಲಿ ಎಂದರು.

0 Comments