ಹಾಸನ :(ನ್ಯೂಸ್ ಮಲ್ನಾಡ್ ವರದಿ) ರಾಜ್ಯದ ಹಲವು ಭಾಗಗಳಲ್ಲಿ ಅತಿಯಾದ ಮಳೆಯಿಂದಾಗಿ ಸಂಕಷ್ಟಗಳು ಎದುರಾಗಿದ್ದರೆ ಮಲೆನಾಡಿನ ಭಾಗಗಳಲ್ಲಿ ನಿರಂತರವಾಗಿ ಕಾಡಾನೆ ದಾಳಿ ಗಳು ಹೆಚ್ಚುತ್ತಿವೆ. ಬೆಳೆದ ಬೆಳೆಯು ಒಂದೆಡೆ ಮಳೆಯಿಂದಾಗಿ ನಾಶವಾದರೆ, ಉಳಿದ ಅಲ್ಪಸ್ವಲ್ಪ ಬೆಳೆಯನ್ನು ಕೂಡ ಪ್ರಾಣಿಗಳು ನಾಶ ಮಾಡುತ್ತಿದೆ.
ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಆಲೂರು ತಾಲೂಕಿನ ಕೆಲ ತೋಟಗಳಿಗೆ ಆನೆಯು ದಾಳಿ ನಡೆಸಿದ ಪರಿಣಾಮ ಪ್ರಮಾಣದ ಬೆಳೆ ನಾಶಹೊಂದಿದೆ. ಈ ಭಾಗಗಳಲ್ಲಿ ಹಿಂದಿನಿಂದಲೂ ಕಾಡಾನೆಗಳ ಉಪಟಳ ಹೆಚ್ಚಿದ್ದು ಆನೆದಾಳಿಗೆ ಸೂಕ್ತವಾದ ಯಾವುದೇ ಕ್ರಮಗಳು ಈವರೆಗೆ ಜರುಗಿಲ್ಲ. ಹಿಂಡುಹಿಂಡಾಗಿ ಬಂದು ದಾಳಿ ನಡೆಸುವ ಆನೆಗಳು ರೈತ ಬೆಳೆದ ಬೆಳೆಯ ಜೊತೆಗೆ ರೈತನ ಜೀವಕ್ಕೂ ಕೂಡ ಸಂಕಷ್ಟ ಅನುಭವಿಸುವಂತೆ ಮಾಡಿದೆ.
ಕಾಫಿ ತೋಟಗಳಲ್ಲಿ ಗುಂಪಾಗಿ ಬೀಡುಬಿಟ್ಟಿರುವ ಆನೆಗಳನ್ನು ಅಲ್ಲಿಂದ ಸ್ಥಳಾಂತರಿಸಲು ಅಸಾಧ್ಯವಾಗಿದೆ. ತೋಟಕ್ಕೆ ಬೇಕಾಗುವ ನೀರಿನ ಸಲುವಾಗಿ ಹಾಕಿದ್ದ ಪಂಪ್ಸೆಟ್ಗಳನ್ನು ಕೂಡ ಆನೆ ನಾಶ ಮಾಡತೊಡಗಿದೆ. ಒಂದೆಡೆ ಬೆಳೆಯು ನಾಶ ಹೊಂದುತ್ತಿದ್ದರೆ ಇನ್ನೊಂದೆಡೆ ಸಾಲ ಮಾಡಿ ಪಡೆದ ಪಂಪ್ಸೆಟ್ ಹಾಗೂ ಇನ್ನಿತರ ಕೃಷಿ ಸಂಬಂಧಿತ ಉಪಕರಣಗಳು ನಾಶವಾಗಿದೆ. ಈ ಭಾಗದ ಕಾಫಿ ಅಡಿಕೆ ಭತ್ತದ ಬೆಳೆಗಳು ಆನೆ ದಾಳಿಯಿಂದ ನಾಶಗೊಂಡಿದೆ.
ಅಧಿಕಾರಿಗಳು ಆನೆ ದಾಳಿಯ ಕುರಿತಾಗಿ ಶೀಘ್ರವಾಗಿ ಗಮನಹರಿಸಬೇಕು, ಹಾಗೂ ನಾಶ ಹೊಂದಿದ ಬೆಳೆಗೆ ಆದಷ್ಟು ಬೇಗ ಸರ್ಕಾರದಿಂದ ಪರಿಹಾರ ಧನ ತರುವಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ತೋಟದ ಮಾಲೀಕರು ಮನವಿ ಮಾಡಿದ್ದಾರೆ.
ತೋಟದ ಕೆಲಸಕ್ಕೆ ಬರಲು ಹೆದರಿದ ಕಾರ್ಮಿಕರು :
ಆನೆ ದಾಳಿಯಿಂದ ತತ್ತರಿಸಿದ ಜನರು ಹಾಗೂ ತೋಟದ ಕೆಲಸ ಮಾಡುವ ಕಾರ್ಮಿಕರು ಇತ್ತೀಚಿನ ದಿನಗಳಲ್ಲಿ ತೋಟಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಜೀವಕ್ಕೆ ಏನಾದರೂ ಆದರೆ ಯಾರು ಹೊಣೆ ಎಂಬ ಪ್ರಶ್ನೆಯೂ ತೋಟದ ಕಾರ್ಮಿಕರನ್ನು ಕಾಡುತ್ತಿದೆ. ಶಾಲಾ ಮಕ್ಕಳು ಕೂಡಾ ಬಹಳ ಭಯದಿಂದ ಓಡಾಡುವ ಪರಿಸ್ಥಿತಿ ಎದುರಾಗಿದೆ. ಕುರಿತಾಗಿ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ತ್ವರಿತ ಕ್ರಮ ಕೈಗೊಂಡು ಸಮಸ್ಯೆಯನ್ನು ನಿವಾರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

0 Comments