ಹಾಸನ : (ನ್ಯೂಸ್ ಮಲ್ನಾಡ್ ವರದಿ) ರಾಜ್ಯದಲ್ಲಿ ಕೊರೋನ ನಿಯಂತ್ರಣಕ್ಕೆ ಬಂದ ನಂತರದ ದಿನಗಳಲ್ಲಿ ಶಾಲೆಗಳು ಆರಂಭವಾಗಿದೆ. ಆನ್ಲೈನ್ ತರಗತಿಗಳು ಸ್ಥಗಿತಗೊಂಡು ಭೌತಿಕ ತರಗತಿಗಳು ಆರಂಭವಾಗಿದೆ.
ಕೊರೋನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಿಕೊಂಡು ಶಾಲಾ ಕಾಲೇಜುಗಳನ್ನು ಆಯಾಯಾ ಶಾಲೆಯ ಶಿಕ್ಷಕರು ನಡೆಸಿಕೊಂಡು ಬರುತ್ತಿದ್ದಾರೆ, ಅದರ ಮಧ್ಯೆಯೂ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹೊನ್ನಾಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸುಮಾರು 17 ಮಕ್ಕಳು ಕೊರೋನ ಸೋಂಕಿಗೆ ತುತ್ತಾಗಿದ್ದಾರೆ.
ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸಿದಾಗ ಹದಿನೇಳು ವಿದ್ಯಾರ್ಥಿಗಳು ಸೋಂಕಿಗೆ ತುತ್ತಾಗಿರುವುದು ಕಂಡು ಬಂದಿದೆ. ತಕ್ಷಣವೇ ವಿದ್ಯಾರ್ಥಿಗಳನ್ನು ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರಿಸಿ ಪೋಷಕರಿಗೆ ವೈದ್ಯರು ಹಾಗೂ ಶಾಲಾ ಸಮಿತಿ ಧೈರ್ಯ ತುಂಬಿದೆ. ವಿದ್ಯಾರ್ಥಿಗಳು ಒಂದು ವಾರದ ವರೆಗೆ ಕ್ವಾರಂಟೈನ್ ನಲ್ಲಿರುವಂತೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸ್ಥಳಕ್ಕೆ ಆರೋಗ್ಯ ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳೀಯ ಶಾಸಕ ಎ.ಟಿ. ರಾಮಸ್ವಾಮಿ ಶಾಲೆಗೆ ಭೇಟಿ ನೀಡಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಅಗತ್ಯ ಸೇವೆಗಳನ್ನು ಒದಗಿಸುವ ಎಲ್ಲಾ ಭರವಸೆಗಳನ್ನು ನೀಡಿದರು.

0 Comments