ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಇಡೀ ಮಲೆನಾಡನ್ನು ಬೆಚ್ಚಿ ಬೀಳಿಸಿದ್ದ ಪ್ರಕೃತ್ ಎಂಬ ಯುವಕನನ್ನು ಕೊಲೆ ಪ್ರಕರಣದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಹಾಡ ಹಗಲೇ ತೋಟಕ್ಕೆ ಹೋಗಿ ಮನೆಗೆ ವಾಪಸಾಗುತ್ತಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂವರು ಕೂಡ ಸಹೋದರರು ಎಂದು ತಿಳಿದುಬಂದಿದೆ. ಜಮೀನಿನ ಕುರಿತಾಗಿ ಈ ಹಿಂದೆಯೇ ಪ್ರಕೃತ್ ಹಾಗೂ ಕೊಲೆಗೈದ ದುಷ್ಕರ್ಮಿಗಳ ಮೇಲೆ ವೈಷಮ್ಯ ಇತ್ತು. ಈ ಕುರಿತಾಗಿ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಈ ಜಾಡನ್ನು ಹಿಡಿದು ಪೊಲೀಸರು ತನಿಖೆ ಆರಂಭಿಸಿದ್ದರು. 

ತನಿಖೆ ಕೈಗೊಂಡ ಬಳಿಕ ಪೊಲೀಸರು ಸಹಜವಾಗಿ ವಿಚಾರಣೆಗೆಂದು ಆರೋಪಿಗಳ ಮನೆಗೆ ಹೋದಾಗ ತೋಟದಲ್ಲಿ ಬಚ್ಚಿಟ್ಟುಕೊಂಡು ಪೊಲೀಸರ ದಿಕ್ಕು ತಪ್ಪಿಸುವ ಕೆಲಸಗಳನ್ನು ಮಾಡಿದಾಗ ಪೊಲೀಸರು ಅನುಮಾನಗೊಂಡು ಡಿವೈಎಸ್ಪಿ ಪ್ರಭು ಅವರ ನೇತೃತ್ವದ ತಂಡದ ಮೂಲಕ  ಶೀಘ್ರ ಕಾರ್ಯಾಚರಣೆಯನ್ನು ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂಬ ಮಾಹಿತಿ ದೊರೆತಿದೆ.

ಬಂಧಿತರನ್ನು ನಾಗರಾಜ್, ಭೈರೇಗೌಡ ಮತ್ತು ಚಂದ್ರೇಗೌಡ ಎಂದು ಗುರುತಿಸಲಾಗಿದೆ. ಬಂಧಿತರಿಂದ ಹತ್ಯೆಗೆ ಬಳಸಿದ ಮಾರಕಾಸ್ತ್ರಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಅಕ್ಷಯ್ ಹಾಕೆ ಅವರು ಮಾಹಿತಿ ನೀಡಿದ್ದಾರೆ. ಕಳೆದ ಎಂಟು ಒಂಬತ್ತು ವರ್ಷಗಳ ಹಿಂದಿನಿಂದಲೆ ಇವೆರಡೂ ಕುಟುಂಬಗಳ ಮಧ್ಯೆ ಜಮೀನಿನ ಕುರಿತಾಗಿ ಗೊಂದಲವಿತ್ತು, ಆದರೆ ಅದು ನಂತರದಲ್ಲಿ ಸುಖಾಂತ್ಯ ಕಂಡಿತ್ತು ಆದರೆ ಮತ್ತೆ ಇತ್ತೀಚಿನ ದಿನಗಳಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದರು. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಘಟನೆಯ ಕುರಿತಾಗಿ ಸಂಪೂರ್ಣ ಮಾಹಿತಿ ದೊರೆಯಲಿದೆ ಎಂದರು.