ಕೊಪ್ಪ : ದೇಶದ ಜನರಿಗೆ ಹಾಗೂ ಬಡವರಿಗೆ ಅತೀ ಕಡಿಮೆ ದರದಲ್ಲಿ ಔಷಧಿಗಳು ಸಿಗಬೇಕು ಎಂಬ ನಿಟ್ಟಿನಲ್ಲಿ, ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಜನ ಔಷಧ ಕೇಂದ್ರವನ್ನು ದೇಶದೆಲ್ಲೆಡೆ ತೆರೆದು, ಜನತೆಗೆ ಗುಣಮಟ್ಟದ ಹಾಗೂ ಕಡಿಮೆ ವೆಚ್ಚದ ಮಾತ್ರೆ ಔಷಧಿಗಳು ಲಭಿಸುವಂತೆ ಮಾಡಿದ್ದಾರೆ. ಆದರೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜನರಿಗೆ ಈ ವ್ಯವಸ್ಥೆ ಸಮರ್ಪಕವಾಗಿ ಲಭಿಸುತ್ತಿಲ್ಲ.
ದೇವರು ಕೊಟ್ಟರು ಪೂಜಾರಿ ನೀಡುತ್ತಿಲ್ಲ ಎಂಬ ಗಾದೆ ಮಾತಿನಂತೆ ಜನ ಔಷಧ ಕೇಂದ್ರ ಕೊಪ್ಪದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ರೀತಿಯ ಉಪಯೋಗಕ್ಕೆ ಬಾರದೆ ಬಾಗಿಲು ಮುಚ್ಚಿ ಸುಮಾರು ಒಂದು ತಿಂಗಳಾದರೂ ಸಂಬಂಧಪಟ್ಟವರು ಈ ಕುರಿತು ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ.
ಇದರ ನಿರ್ವಹಣೆಯ ಹೊಣೆಯನ್ನು ಎಂ.ಎಸ್.ಐ.ಎಲ್ ಸಂಸ್ಥೆಗೆ ಸರ್ಕಾರ ವಹಿಸಿದ್ದು, ಸಂಸ್ಥೆ ಈಗ ನೌಕರರು ಇಲ್ಲ ಎಂಬ ನೆಪ ಒಡ್ಡಿ ಸುಮಾರು ಒಂದು ತಿಂಗಳಿಂದ ಬಾಗಿಲು ಮುಚ್ಚಿದೆ. ರೋಗಿಗಳಿಗೆ ಸಿಗಬೇಕಾದ ಔಷಧಗಳು ಸಿಗದೆ ರೋಗಿಗಳು ಪರದಾಡುವಂತಹ ಪರಿಸ್ಥಿತಿ ಪ್ರಸ್ತುತ ಎದುರಾಗಿದೆ.
ಜನ ಔಷಧ ಕೇಂದ್ರ ಮುಚ್ಚಿರುವ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಒಂದಕ್ಕೆ ಮೂರು ಪಟ್ಟು ಜಾಸ್ತಿ ಹಣವನ್ನು ನೀಡಿ ಅದೇ ಔಷಧವನ್ನು ಹೊರಗಿನಿಂದ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಳಲನ್ನು ಹೊರಹಾಕಿದ್ದಾರೆ. ಒಬ್ಬ ಉದ್ಯೋಗಿಯನ್ನು ನೇಮಿಸಲು ತಿಂಗಳುಗಳ ಕಾಲಾವಕಾಶ ಬೇಕಾಗಿಲ್ಲ, ಜನ ಪ್ರತಿನಿಧಿಗಳು ಈ ಕುರಿತು ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಆದಷ್ಟು ಬೇಗ ಅಧಿಕಾರಿಗಳು ಎಚ್ಚೆತ್ತುಕೊಂಡು ವೈದ್ಯಕೀಯ ವಿಚಾರದ ಈ ಗಂಭೀರ ಸಮಸ್ಯೆಯನ್ನು ಪರಿಹರಿಸಬೇಕಿದೆ.
ವರದಿ : ಹರೀಶ್ ನಾರ್ವೆ

0 Comments