ಚಿಕ್ಕಮಗಳೂರು : ಮಲೆನಾಡಿನಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಹಲವೆಡೆ ಅವಘಡಗಳು ಸಂಭವಿಸಿದೆ. ಇನ್ನೊಂದೆಡೆ ಬೆಳೆದ ಫಸಲನ್ನು ಪಡೆಯಲಾರದೆ ಮಲೆನಾಡಿನ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ಕೇಂದ್ರ ಸರ್ಕಾರವು ಕಾಫಿ ಬೆಳೆಗಾರರ ಸಮಸ್ಯೆಯನ್ನು ಪರಿಹರಿಸಲು ಆದಷ್ಟು ಶೀಘ್ರವಾಗಿ ಗಮನಹರಿಸಬೇಕೆಂದು ಕಾಫಿ ಮಂಡಳಿಯ ಸಿ.ಇ.ಓ ಒತ್ತಾಯಿಸಿದ್ದಾರೆ. ಇಂದು ಬಾಳೂರಿನ ಸುತ್ತಮುತ್ತಲೂ ಇರುವ ಕಾಫಿ ತೋಟಗಳಿಗೆ ಭೇಟಿ ನೀಡಿದ ಅವರು, ಬೆಳೆಗಾರರು ಹೊಂದಿದ ನಷ್ಟದ ಕುರಿತಾಗಿ ಅಂದಾಜಿಸಿದ್ದಾರೆ.
ಹವಾಮಾನ ವೈಪರೀತ್ಯದಿಂದ ಕಾಫಿ ಬೆಳಗಾರರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಬೆಳಗಾರರ ವಿವಿಧ ಸಮಸ್ಯೆಯನ್ನು ಕಾಫಿ ಮಂಡಳಿ ವತಿಯಿಂದ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾಕ್ಟರ್ ಕೆ.ಜಿ.ಜಗದೀಶ್ ಹೇಳಿದರು.
ಬಾಳೂರು,ಮೇಗೂರು ಸುತ್ತಮುತ್ತಲಿನ ಕಾಫಿ ಎಸ್ಟೇಟುಗಳಿಗೆ ಭೇಟಿ ನೀಡಿ ನಂತರ ಬಾಳೂರಿನ ಸುವರ್ಣಗಿರಿಯಲ್ಲಿ ಸಭೆ ನಡೆಸಿ ಮಾತನಾಡಿದ ಅವರು ಕಾಫಿ ತೋಟಗಳಲ್ಲಿ ಅರೇಬಿಕಾ ಕಾಫಿ ಮಳೆಗೆ ಉದುರಿ ಕೊಳೆಯುತ್ತಿದೆ. ಬೆಳೆಗಾರರು ಕಾಫಿಯನ್ನು ಕೊಯ್ಲು ಮತ್ತು ಒಣಗಿಸಲು ಆಗದೆ ಸಂಕಷ್ಟ ಪಡುತ್ತಿರುವುದು ಭೇಟಿಯಿಂದ ಪರಿಶೀಲಿಸಿದ ಬಳಿಕ ತಿಳಿದುಬಂದಿದೆ. ನವೆಂಬರ್ ತಿಂಗಳಿನಲ್ಲಿ ಅಕಾಲಿಕ ಮಳೆ ಸುರಿಯುತ್ತಿರುವುದರಿಂದ ಕಾಫಿ ಬೆಳೆ ನಷ್ಟದ ಹಾದಿ ತುಳಿದಂತಾಗಿದೆ. ಕಾಫಿ ಸಮಗ್ರ ವರದಿಯನ್ನು ಮಂಡಳಿ ವತಿಯಿಂದ ಕೇಂದ್ರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲಾಗುವುದು ಎಂದರು. ಮೂಡಿಗೆರೆ ತಾಲೂಕು ಬೆಳೆಗಾರರ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಮಾತನಾಡಿ ಕಾಫಿ ಬೆಳೆ, ನೀರು ಪಾಲಾಗುತ್ತಿದ್ದು, ಕೈಗೆ ಬಂದ ಫಸಲನ್ನು ಕಳೆದುಕೊಂಡಿರುವ ಕಾಫಿ ಬೆಳೆಗಾರರ ಸ್ಥಿತಿ ಶೋಚನೀಯವಾಗಿದೆ. ಬೆಳಗಾರರು ಬ್ಯಾಂಕುಗಳಲ್ಲಿ ಮಾಡಿರುವ ಸಾಲ ತೀರಿಸಲು ಸಾಧ್ಯವಾಗದ ಕಾರಣ ಸೂಕ್ತ ಪರಿಹಾರದ ಪ್ಯಾಕೇಜ್ ದೊರಕಿಸಿಕೊಟ್ಟು ಶೇಕಡ 3ರ ಬಡ್ಡಿ ದರದಲ್ಲಿ ಹೊಸದಾಗಿ ಸಾಲ ಸೌಲಭ್ಯ ಕಲ್ಪಿಸಲು ನೆರವಾಗಬೇಕು ಎಂದರು.
ವಿದೇಶಿ ಮಾರುಕಟ್ಟೆಯಲ್ಲಿ ಭಾರತದ ಕಾಫಿಗೆ ಪ್ರೀಮಿಯಂ ಬೆಲೆ ಇರುವುದರಿಂದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳಗಾರರು ಕಾಫಿ ಫಸಲನ್ನು ಜೋಪಾನಮಾಡಿ ಗುಣಮಟ್ಟ ಕಾಯ್ದುಕೊಳ್ಳಲು ಕಾಫಿ ಡ್ರೈಯರ್ ಹಾಗೂ ಪಾಲಿಹೌಸ್ ಗಳ ಅವಶ್ಯಕತೆ ಇದ್ದು, ಕಾಫಿ ಮಂಡಳಿ ಮುಖಾಂತರ ಅವುಗಳ ನಿರ್ಮಾಣಕ್ಕೆ ಶೇಕಡ 90ರ ಸಹಾಯಧನ ಒದಗಿಸಿಕೊಡಬೇಕು. ಖಾಸಗಿ ಕಂಪನಿಯವರು ಅಂತರಾಷ್ಟ್ರೀಯ ಮಾರುಕಟ್ಟೆಯಂತೆ ಸರಿಯಾದ ಬೆಲೆ ನಿಗದಿಪಡಿಸುತಿಲ್ಲ. ಆದ್ದರಿಂದ ಮಲ್ಟಿ ಸ್ಟೇಟ್ ಕೋ-ಆಪರೇಟಿವ್ ಸಂಸ್ಥೆಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ರೂ100 ಕೋಟಿ ಅನುದಾನ ದೊರಕಿಸಿಕೊಡಬೇಕು. ಇತರ ಬೆಳೆಗಳಂತೆ ಕಾಫಿ ಬೆಳೆಗೂ ಸಹ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸಿ ಕಾಫಿ ಬೆಳೆ ವಿಮೆ ಜಾರಿಗೊಳಿಸಬೇಕು ಎಂದು ಸಭೆಯಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆಜಿಎಫ್ ಅಧ್ಯಕ್ಷ ಡಾಕ್ಟರ್ ಹೆಚ್.ಟಿ. ಮೋಹನ್ ಕುಮಾರ್, ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಮ್, ಡಿ.ಬಿ.ಸುಬ್ಬೆಗೌಡ ಬೆಳೆಗಾರರ ಸಂಘದ ಕಾರ್ಯದರ್ಶಿ ಮನೋಹರ್, ನಿರ್ದೇಶಕ ಹಳಸೆ ಶಿವಣ್ಣ, ಎಚ್.ಪಿ. ದೇವರಾಜು ಎಂ.ವಿ.ಚೆನ್ನಕೇಶವ ಗೌಡ, ಬಿ.ಎಸ್. ಕಲ್ಲೇಶ್ ಮತ್ತು ಕಾಫಿ ಮಂಡಳಿ ಅಧಿಕಾರಿಗಳು ಇದ್ದರು.
ತನು ಕೊಟ್ಟಿಗೆಹಾರ, ವರದಿಗಾರರು.

0 Comments