ಕಳಸ : (ನ್ಯೂಸ್ ಮಲ್ನಾಡ್ ವರದಿ) ಸಂಪೂರ್ಣವಾಗಿ ಗುಂಡಿಬಿದ್ದು ಹದಗೆಟ್ಟಿರುವ ರಸ್ತೆಗಳನ್ನು ಆದಷ್ಟು ಶೀಘ್ರವಾಗಿ ಮರು ಡಾಂಬರೀಕರಣ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನೆಲ್ಲಿಬೀಡು ಘಟಕ ಹಾಗೂ ವಿವಿಧ ಸ್ಥಳೀಯ ಸಂಘ ಸಂಸ್ಥೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

ಪ್ರತಿಭಟನೆಯ ಆರಂಭದ ವೇಳೆಗೆ ವಾಹನಗಳನ್ನು ತಡೆ ಹಿಡಿದ ಪ್ರತಿಭಟನಾಕಾರರು ಕೆಲ ಸಮಯಗಳ ಕಾಲ ರಸ್ತೆ ತಡೆ ನಡೆಸಿದರು. ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ಜನರು ಧಿಕ್ಕಾರ ಕೂಗಿದರು. ಕೆಲಕಾಲ ಪೊಲೀಸರ ಹಾಗೂ ಸ್ಥಳೀಯರ ನಡುವೆ ತೀವ್ರ ವಾಗ್ದಾಳಿ ನಡೆಯಿತು ನಂತರ ಪೊಲೀಸರ ಮನವಿಗೆ ಓಗೊಟ್ಟು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. 

ರಸ್ತೆಯ ಗುಂಡಿಗಳಿಗೆ ಮೀನು ಬಿಟ್ಟು ವಿಶಿಷ್ಟ ಪ್ರತಿಭಟನೆ :

ರಸ್ತೆಯಲ್ಲಿರುವ ಹೊಂಡಗಳಿಗೆ ಮೀನುಗಳನ್ನು ತಂದು ಬಿಟ್ಟು ಹಾಗೂ ರಸ್ತೆಯ ಗುಂಡಿಗಳಿಗೆ ಬಾಳೆ ಮರವನ್ನು ನೆಟ್ಟು ಅಧಿಕಾರಿಗಳಿಗೆ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು ಪಿಡಬ್ಲ್ಯುಡಿ ಆಧಿಕಾರಿ ಸತೀಶ್ ಅವರು ಸ್ಥಳಕ್ಕೆ ಆಗಮಿಸಬೇಕು ಹಾಗೂ ತಕ್ಷಣ ಜನರಿಗೆ ಹೊಂಡಬಿದ್ದ ರಸ್ತೆಯಿಂದ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿದರು.

ನಂತರ ಸ್ಥಳಕ್ಕೆ ಆಗಮಿಸಿದ ಪಿಡಬ್ಲ್ಯುಡಿ ಇಂಜಿನಿಯರ್ ಸತೀಶ್ ಅವರು ಜನರ ಅಹವಾಲು ಸ್ವೀಕಾರ ಮಾಡಿದರು. ಸಮಸ್ಯೆಯ ಕುರಿತಾಗಿ ಸಂಪೂರ್ಣ ಅರಿವಾಗಬೇಕಾದರೆ ಒಮ್ಮೆ ನೀವು ರಿಕ್ಷಾದಲ್ಲಿ ಇಲ್ಲಿನ ರಸ್ತೆಯಲ್ಲಿ ಪ್ರಯಾಣ ಮಾಡಬೇಕು ಎಂದು ಸ್ಥಳೀಯರು ರಿಕ್ಷಾ ಪ್ರಯಾಣಕ್ಕೆ ಇಂಜಿನಿಯರ್ ಸತೀಶ್ ಅವರನ್ನು ಆಹ್ವಾನಿಸಿದರು. 

ನಂತರ ಮಾತನಾಡಿದ ಇಂಜಿನಿಯರ್ ಸತೀಶ್ ಅವರು ಶೀಘ್ರವಾಗಿ ಚರಂಡಿ ,ರಸ್ತೆಯ ಕಾಮಗಾರಿ ನಡೆಸಲು ಸೂಚನೆ ನೀಡಿದ್ದೇನೆ. ಶೀಘ್ರವಾಗಿ ಸರ್ವೇ ಮಾಡಿ ಸಮರ್ಪಕ ರಸ್ತೆಯನ್ನು ನಿರ್ಮಾಣ ಮಾಡಿ ಕೊಡುತ್ತೇವೆ ಎಂದು ಜನರಿಗೆ ಭರವಸೆಯನ್ನು ನೀಡಿದರು.

ಕರ್ನಾಟಕ ರಕ್ಷಣಾ ವೇದಿಕೆ ನೆಲ್ಲಿಬೀಡು ಘಟಕ ಅಧ್ಯಕ್ಷ ಸುರೇಶ್ ಕುಚಗೇರಿ, ನವೋದಯ ಯುವಕ ಸಂಘದ ಪದಾಧಿಕಾರಿಗಳು,ಕನ್ನಡ ಜ್ಯೋತಿ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಇನ್ನಿತರ ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಸದಸ್ಯರುಗಳು ಹಾಗೂ ಸ್ಥಳೀಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.