ಚಿಕ್ಕಮಗಳೂರು : ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ  ಸಲುವಾಗಿ ರಾತ್ರೋ ರಾತ್ರಿ ಅನಧಿಕೃತವಾಗಿ ನಿರ್ಮಾಣ ಮಾಡಿದ್ದ  ಶೆಡ್ ಅನ್ನು  ಕಂದಾಯ ಇಲಾಖೆಯ ಅಧಿಕಾರಿಗಳು ತೆರವುಗೊಳಿಸಿದ ಘಟನೆ ಇಂದು ಮೂಡಿಗೆರೆಯಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಫಲ್ಗುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾನಳ್ಳಿ ಗ್ರಾಮದ ನಿವೇಶನ ರಹಿತ ಜಾಗದಲ್ಲಿ ಈ ಘಟನೆ ಸಂಭವಿಸಿದೆ. 

ಮೂಡಿಗೆರೆಯ ಫಲ್ಗುಣಿ ಗ್ರಾಮದ ಸರ್ವೇ ನಂಬರ್ 249 ರ ಸರಕಾರಿ ಜಾಗದಲ್ಲಿ ಶೆಡ್ ಹಾಕಲಾಗಿತ್ತು.  ಈ ಜಮೀನಿನಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಆಟದ ಮೈದಾನ , ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ದಾದಿಯರ  ವಸತಿಗೃಹ ನಿರ್ಮಾಣ ಮಾಡುವ ಉದ್ದೇಶದಿಂದ ಜಾಗ ಮೀಸಲೀರಿಸಲಾಗಿದೆ ಎಂದು ಪಂಚಾಯಿತಿ ಮೂಲಗಳು ತಿಳಿಸಿದೆ.

ಘಟನೆಯ ಕುರಿತಾಗಿ ಅನಧಿಕೃತ ಶೆಡ್ ಗಳನ್ನು ತೆಗೆಸಲು ಧಾವಿಸಿದ ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು  ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಹಾಕಿದ್ದ ಎಲ್ಲಾ ಶೆಡ್ ಗಳನ್ನು ಇಂದು ತೆರವುಗೊಳಿಸಿದ್ದಾರೆ.

ಕಂದಾಯ ಅಧಿಕಾರಿ ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿಗಳಾದ ಉಮೇಶ್, ಸೋಮಶೇಖರ್, ಆನಂದ್, ನಮಿತ, ವಿನುತ,ನಿತ್ಯ, ಅನಿಷ, ರಮ್ಯಾ, ಅನುಷಾ, ಮತ್ತು ಕಂದಾಯ ಸಹಾಯಕರು ಸ್ಥಳದಲ್ಲಿದ್ದರು.

ತನು ಕೊಟ್ಟಿಗೆಹಾರ, ವರದಿಗಾರರು.