ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ಪ್ರಸ್ತುತ ದಿನಗಳಲ್ಲಿ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ನಡೆಸುತ್ತಿದೆ, ರೈತ ವಿರೋಧಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿ, ಚಿಕ್ಕಮಗಳೂರು ಹಾಗೂ ಕಡೂರಿನ ಹೆದ್ದಾರಿ ತಡೆಯುವುದಾಗಿ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಆರ್ ದುಗ್ಗಪ್ಪಗೌಡ ತಿಳಿಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ರೈತ ಸಂಘಟನೆಗಳ ಒಕ್ಕೂಟ ಇಡೀ ಭಾರತದಾದ್ಯಂತ ಹೆದ್ದಾರಿ ತಡೆಗೆ ಕರೆ ನೀಡಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ನಡೆಸುವುದಾಗಿ ತಿಳಿಸಿದ್ದಾರೆ. ನ.26 ರ ಬೆಳಗ್ಗೆ 11 ಗಂಟೆಗೆ ಚಿಕ್ಕಮಗಳೂರು ಹಾಗೂ ಕಡೂರಿನ ಹೆದ್ದಾರಿ ತಡೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ರೈತ ವಿರೋಧಿ ಕೃಷಿ ಕಾಯ್ದೆಯನ್ನು ವಾಪಸ್ ಪಡೆಯಲು ನಿರ್ಧಾರ ಮಾಡಿರುವುದು ಸಂತಸ ತಂದಿದೆ,ಇದನ್ನು ನಾವು ಸ್ವಾಗತಿಸುತ್ತೇವೆ ಆದರೆ ಈ ಕುರಿತಾಗಿ ಸಂಸತ್ತಿನಲ್ಲಿ ಅಂತಿಮ ನಿರ್ಣಯ ತೆಗೆದುಕೊಂಡು, ಕಾಯ್ದೆ ರದ್ದಾಗುವವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದರು.
ಸರ್ಫೇಸಿ ಕಾಯ್ದೆ ಹಿಂಪಡೆಯುವಂತೆ ಆಗ್ರಹ :
ರೈತರ ಬದುಕನ್ನು ಇನ್ನಷ್ಟು ಪೇಚಿಗೆ ಸಿಲುಕಿಸಿರುವ ಸರ್ಫೇಸಿ ಕಾಯ್ದೆಯನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ದುಗ್ಗಪ್ಪ ಗೌಡ ಅವರು ಆಗ್ರಹಿಸಿದ್ದಾರೆ. ರೈತರ ಆತ್ಮಹತ್ಯೆಗಳಿಗೆ ಮುಖ್ಯ ಕಾರಣವೇ ಸರ್ಫೇಸಿ ಕಾಯ್ದೆಯಾಗಿದೆ. ರೈತರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಈ ಕಾಯ್ದೆಯು ಸಮಾಜಕ್ಕೆ ಕೆಡುಕನ್ನು ಉಂಟು ಮಾಡುತ್ತಿದೆ ಆದ ಕಾರಣ ಈ ಕೂಡಲೇ ಈ ಕಾಯ್ದೆಯನ್ನು ಸಹ ರದ್ದು ಮಾಡಬೇಕೆಂದರು.

0 Comments