ಚಿಕ್ಕಮಗಳೂರು : ಉಪ ಚುನಾವಣೆಯ ಫಲಿತಾಂಶ ಮಿಶ್ರಣವಾಗಿದೆ. ಜನರ ತೀರ್ಪನ್ನು ಸದಾ ಬಿಜೆಪಿ ಸ್ವೀಕಾರ ಮಾಡುತ್ತದೆ ಎಂದು ಚಿಕ್ಕಮಗಳೂರಿನ ಶಾಸಕ ಸಿಟಿ ರವಿ ಹೇಳಿಕೆ ನೀಡಿದರು.
ತತ್ವ ಸಿದ್ಧಾಂತಗಳನ್ನು ಹೊಂದಿರುವ ರಾಷ್ಟ್ರೀಯ ಪಕ್ಷ ಬಿಜೆಪಿಯಾಗಿದೆ. ಬರೀ ಚುನಾವಣೆಗಾಗಿ ನಾವು ಸಂಘಟನೆ ಮಾಡುವುದಿಲ್ಲ, ನಮ್ಮದು ನಿರಂತರವಾಗಿ ಸಕ್ರಿಯ ಕಾರ್ಯಕರ್ತರನ್ನು ಹೊಂದಿರುವ ಭಾರತದ ಬಹು ದೊಡ್ಡ ಪಕ್ಷ ಎಂದು ಹೇಳಿದರು.
ಇವಿಎಂ ಮಶೀನ್ ದೂರಲು ನಾವು ಬೇರೆ ಪಕ್ಷಗಳಲ್ಲ :
ಸಿಂದಗಿ ಮತ್ತು ಹಾನಗಲ್ ಎರಡೂ ಕ್ಷೇತ್ರಗಳಲ್ಲಿ ಅಕಸ್ಮಾತ್ ಬಿಜೆಪಿ ಗೆದ್ದಿದ್ದರೆ, ಇವಿಎಂ ಮಶೀನ್ ಅನ್ನು ಇಲ್ಲಿನ ಎರಡು ಪಕ್ಷಗಳು ದೂರುತ್ತಿತ್ತು, ಆದರೆ ನಾವು ಉಳಿದೆರಡು ಪಕ್ಷಗಳ ಹಾಗೆ ವರ್ತನೆ ಮಾಡುವುದಿಲ್ಲ. ನಮ್ಮದು ಉತ್ತಮ ಅಡಿಪಾಯ ಇರುವ ಪಕ್ಷ ಆದಕಾರಣ ನಾವು ಗೆದ್ದ ಇಬ್ಬರನ್ನೂ ಅಭಿನಂದಿಸುತ್ತೇವೆ ಹಾಗೂ ಜನರ ತೀರ್ಪನ್ನು ಸದಾಕಾಲ ಗೌರವಿಸುತ್ತೇವೆ ಎಂದರು.
ಜೆಡಿಎಸ್ ಪಕ್ಷವನ್ನು ಕುಟುಕಿದ ಸಿ.ಟಿ ರವಿ :
ಪ್ರಾದೇಶಿಕ ಪಕ್ಷಕ್ಕೆ ಜನ ಬೆಂಬಲ ಇದೆ ಎಂದು ಸದಾ ಎಲ್ಲೆಡೆ ಹೇಳಿಕೊಂಡು ತಿರುಗುವ ಕುಮಾರಸ್ವಾಮಿ ಅವರು ಇಂದು ಠೇವಣಿಯನ್ನು ಉಳಿಸಿಕೊಳ್ಳಲು ಪರದಾಟ ನಡೆಸಿದ್ದಾರೆ, ಇದರಿಂದಲೇ ತಿಳಿಯುತ್ತದೆ ಜೆಡಿಎಸ್ ಪಕ್ಷಕ್ಕೆ ಸಿಕ್ಕಿರುವ ಜನಮನ್ನಣೆ ಎಂದು ಲಘುವಾಗಿ ಜೆಡಿಎಸ್ ಪಕ್ಷವನ್ನು ಕುಟುಕಿದರು. ಎರಡೂ ಕ್ಷೇತ್ರಗಳಲ್ಲಿ ಕೂಡ ಜೆಡಿಎಸ್ ಪಕ್ಷದ ಸಂಘಟನೆ ಇಲ್ಲ, ಭವಿಷ್ಯದ ರಾಜಕಾರಣದ ಕುರಿತಾಗಿ ಬಹಳ ಮಾತನಾಡುವವರು ಈಗಲೇ ಸಮಗ್ರವಾಗಿ ಈ ಕುರಿತು ಯೋಚಿಸಬೇಕು ಎಂದರು.
ಸೋಲಿನ ವಿಮರ್ಶೆ ಮಾಡಿದ ಸಿ.ಟಿ ರವಿ :
ನಾಮಪತ್ರ ಸಲ್ಲಿಕೆಯ ಹಿಂದಿನ ದಿನದವರೆಗೂ ಬಿಜೆಪಿಯ ಅಭ್ಯರ್ಥಿ ಯಾರೆಂದು ಅಂತಿಮವಾಗದೆ ಇದದ್ದು ಬಿಜೆಪಿಯ ಸೋಲಿಗೆ ಕಾರಣ ಇರಬಹುದು ಎಂದು ತಿಳಿಸಿದರು. ಈ ಸೋಲಿನಿಂದ ಕಲಿತದ್ದು ಬಹಳಷ್ಟಿದೆ, ಮುಂದಿನ ದಿನಗಳಲ್ಲಿ ಈ ಕುರಿತು ಹೆಚ್ಚಿನ ಆಲೋಚನೆ ನಡೆಸಿ ಸಮಗ್ರವಾಗಿ ಪಕ್ಷ ಸಂಘಟನೆಯನ್ನು ಇನ್ನಷ್ಟು ಬಲಿಷ್ಟ ಗೊಳಿಸುವುದಾಗಿ ತಿಳಿಸಿದರು.
ತನು ಕೊಟ್ಟಿಗೆಹಾರ, ವರದಿಗಾರರು.

0 Comments