ಚಿಕ್ಕಮಗಳೂರು : ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ಬೆಳ್ಳಂಬೆಳಗ್ಗೆ ದುರ್ಘಟನೆಯೊಂದು ಸಂಭವಿಸಿದೆ.ಕಳೆದೆರಡು ದಿನಗಳಿಂದ ಚಾರ್ಮಾಡಿ ಘಾಟಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತಿಯಾದ ಮಳೆಯಾಗಿದ್ದು, ಈ ಮಳೆಯಿಂದಾಗಿ ಅಲ್ಲಲ್ಲಿ ಅವಘಡಗಳು ಸಂಭವಿಸುತ್ತಿದೆ.
ರಾಮನಗರದಿಂದ ಧರ್ಮಸ್ಥಳದ ಕಡೆಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವನ ಮೇಲೆ ಭಾರಿ ಗಾತ್ರದ ಮರ ಬಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ರಾಮನಗರ ಜಿಲ್ಲೆಯ ಚನ್ನಪಟ್ಟಣದ ನಿವಾಸಿ ಜೀವನ್ (21) ಎಂದು ಗುರುತಿಸಲಾಗಿದೆ. ಬೆಳಗ್ಗಿನ ಜಾವ ನಾಲ್ಕು ಗಂಟೆಯ ಆಸುಪಾಸಿನಲ್ಲಿ ಈ ಘಟನೆ ಸಂಭವಿಸಿದೆ ಎಂದು ಮಾಹಿತಿ ದೊರೆತಿದೆ. ಯುವಕನು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು.

0 Comments