ಶೃಂಗೇರಿ :(ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ವಿಶೇಷವಾದ ವೀರ ಮಾಸ್ತಿಕಲ್ಲೊಂದು ಪತ್ತೆಯಾಗಿದೆ.

ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಿಣಿಕಲ್ ಗ್ರಾಮದ ಕಾಳ್ಯ ಎಂಬಲ್ಲಿ ಹದಿನಾರನೇ ಶತಮಾನಕ್ಕೆ ಸೇರಿದ ಪ್ರಾಚೀನ ಕಾಲದ ವೀರ ಮಾಸ್ತಿಕಲ್ಲೊಂದು ದೊರೆತಿದೆ. ಈ ವೀರಮಾಸ್ತಿಕಲ್ಲನ್ನು ಶಿಕ್ಷಕ ಸುರೇಶ್ ಕಲ್ಕೆರೆ ಇವರ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶೈಲ ಅನಂತರಾಮು ಕುಂಚೇಬೈಲು ಇವರು ಪತ್ತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಈ ವೀರಮಾಸ್ತಿಕಲ್ಲು 185 ಸೆಂ.ಮೀ ಎತ್ತರ ಹಾಗೂ 65 ಸೆಂ.ಮೀ ಅಗಲವಿದೆ. ನಾಲ್ಕು ಪಟ್ಟಿಕೆಗಳನ್ನು ಹೊಂದಿರುವ ಶಿಲ್ಪದ ಕೆಳಗಿನ ಪಟ್ಟಿಕೆಯಲ್ಲಿ ಬಿಲ್ಲು ಬಾಣ ಗುರಾಣಿ ಹಿಡಿದು ಯುದ್ಧ ಮಾಡುತ್ತಿರುವ, ಕಹಳೆ ಹಿಡಿದಿರುವ ಸ್ತ್ರೀಯರ ಉಬ್ಬು ಶಿಲ್ಪಗಳಿವೆ. ಅದರ ಮೇಲಿನ ಪಟ್ಟಿಕೆಯಲ್ಲಿ ಅಶ್ವದ ಮೇಲೆ ಕತ್ತಿ ಹಿಡಿದು ಕುಳಿತಿರುವ ಸತಿಯ ಉಬ್ಬು ಶಿಲ್ಪವಿದೆ. ಅದರ ಬಲಭಾಗದಲ್ಲಿ ಕತ್ತಿ ಗುರಾಣಿ ಹಿಡಿದಿರುವ ಸ್ತ್ರೀಯ ಶಿಲ್ಪವಿದೆ, ಎಡಭಾಗದಲ್ಲಿ ಚಾಮರ ಹಿಡಿದಿರುವ ಸ್ತ್ರೀಯ ಶಿಲ್ಪ ಕೆತ್ತಲಾಗಿದೆ. ಮಧ್ಯದ ಪಟ್ಟಿಕೆಯಲ್ಲಿ ಪೀಠದ ಮೇಲೆ ಕುಳಿತಿರುವ ಸತಿಯ ಮತ್ತು ಆಕೆಯ ಪತಿಯ ಶಿಲ್ಪವನ್ನು ಕೆತ್ತಲಾಗಿದೆ. ಪಟ್ಟಿಕೆಯ ಮಧ್ಯದಲ್ಲಿ ಒಕ್ಕೈಯನ್ನು ಕೆತ್ತಲ್ಪಟ್ಟಿದೆ. ಮೇಲಿನ ಪಟ್ಟಿಕೆಯ ಮೇಲ್ಭಾಗದಲ್ಲಿ ಸೂರ್ಯ ಚಂದ್ರರ ಉಬ್ಬು ಕೆತ್ತನೆಯಿದೆ. ಇಂತಹ ಇತಿಹಾಸ ತಿಳಿಸುವ ಶಿಲ್ಪಗಳನ್ನು ಉಳಿಸಿಕೊಳ್ಳುವುದು ಹಾಗೂ ಅವುಗಳ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಹಾಗೂ ಇತಿಹಾಸವನ್ನು ತಿಳಿದುಕೊಳ್ಳಲು ಈ ರೀತಿಯ ಪ್ರಾಚೀನ ಶಿಲೆಗಳನ್ನು ಉಳಿಸುವುದು ಎಲ್ಲರ ಹೊಣೆಯಾಗಿದೆ ಎಂದು ತಿಮ್ಮಪ್ಪ ಗೌಡರು ಅಭಿಪ್ರಾಯಪಟ್ಟಿದ್ದಾರೆ. ಶಮಂತ್ ಕುಂಚೇಬೈಲು ಈ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ.