ಕೊಡಗು: (ನ್ಯೂಸ್ ಮಲ್ನಾಡ್ ವರದಿ) ಈ ಬಾರಿಯ ಹಿಂಗಾರು ಮಳೆಯಿಂದಾಗಿ ರೈತರು ಬಹಳ ಸಂಕಷ್ಟ ಅನುಭವಿಸುತ್ತಿರುವ ಕಾರಣ  ಕೂಡಲೇ ಬೆಳೆ ನಷ್ಟದಿಂದಾಗಿ ಕಂಗಾಲಾಗಿರುವ ರೈತರಿಗೆ ಆದಷ್ಟು ಬೇಗ ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. 

ಮಳೆಯಿಂದಾಗಿ ಉಂಟಾದ ಬೆಳೆ ನಷ್ಟವನ್ನು ಭರಿಸಲು ಕೃಷಿ ಮತ್ತು ಕಂದಾಯ ಇಲಾಖೆ ಬೆಳೆ ನಷ್ಟದ ಜಂಟಿ ಸಮೀಕ್ಷೆ ನಡೆಸಿ, ನಷ್ಟದ ಕುರಿತಾದ ಮಾಹಿತಿಯನ್ನು ಸರ್ಕಾರದ ಪೋರ್ಟಲ್ ಗೆ ಅಪ್ಲೋಡ್ ಮಾಡಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. 

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬೇಳೂರು ಗ್ರಾಮಕ್ಕೆ ಕಂದಾಯ ಸಚಿವ ಆರ್ ಅಶೋಕ್ ಭೇಟಿ ನೀಡಿದರು. ಕೊಡಗಿನ ಮುಖ್ಯ ಬೆಳೆಯಾದ ಕಾಫೀ ನಾಶ ಹೊಂದಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ಆರ್.ಅಶೋಕ್ ರೈತರಿಗೆ ಶೀಘ್ರವಾಗಿ ಪರಿಹಾರ ದೊರಕಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂಬ ಭರವಸೆಯನ್ನು ನೀಡಿದರು. 

ವಾಡಿಕೆಗಿಂತ ಹೆಚ್ಚು ಮಳೆಯಾದ ಕಾರಣ ರಾಜ್ಯದ ಹಲವು ಭಾಗಗಳಲ್ಲಿ ಬಹಳಷ್ಟು ಸಮಸ್ಯೆಗಳು ಉಂಟಾಗಿದ್ದು ಶೀಘ್ರವೆ ಸಮಸ್ಯೆಗಳನ್ನು ಪರಿಹಾರ ಮಾಡಿ ಜನರಿಗೆ ಜೀವನ ನಡೆಸಲು ಯಾವುದೇ ರೀತಿಯ ತೊಂದರೆಗಳು ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದರು.