ಹಾಸನ :(ನ್ಯೂಸ್ ಮಲ್ನಾಡ್ ವರದಿ) ಹಾಸನದ ಜನತಾದಳ ಪಕ್ಷದ ನಾಯಕ ಹೆಚ್.ಡಿ ರೇವಣ್ಣ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

ರಾಜ್ಯದ ಉದ್ಧಾರಕ್ಕಾಗಿ ಜನರ ಒಳಿತಿಗಾಗಿ ಶ್ರಮಿಸಿದ ಪಕ್ಷ ನಮ್ಮದು ರೈತರ ಸೇವೆಗಾಗಿ ಸದಾಕಾಲ ಹಿತಕಾಯುವ ಪಕ್ಷ ಜೆಡಿಎಸ್. ಮಾಜಿ ಪ್ರಧಾನಿ ದೇವೇಗೌಡ ರವರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ ರೈತರ ಹಾಗೂ ಬಡವರ ಸಬಲೀಕರಣಕ್ಕಾಗಿ ತಂದ ಯೋಜನೆಗಳನ್ನು ಒಮ್ಮೆ ಬೇರೆ ಪಕ್ಷದ ನಾಯಕರುಗಳು ತಿಳಿದುಕೊಳ್ಳಬೇಕು ಎಂದರು.

ರಾಜಕೀಯ ಕ್ಷೇತ್ರದಲ್ಲಿ ಈ ಹಿಂದಿನಿಂದಲೂ ಕೂಡ ಕುಟುಂಬ ರಾಜಕಾರಣವನ್ನು ನಡೆಸುತ್ತಾ ಬಂದಿರುವುದು ಕಾಂಗ್ರೆಸ್ ಪಕ್ಷವಾಗಿದೆ. ಎಲ್ಲಾ ಪಕ್ಷಗಳಲ್ಲಿಯೂ ಕೂಡ ಕುಟುಂಬದ ಸದಸ್ಯರು ರಾಜಕೀಯದಲ್ಲಿ ಇದ್ದೆ ಇರುತ್ತಾರೆ. ಕೇವಲ ಜೆಡಿಎಸ್ ಪಕ್ಷವನ್ನು ದೂರದೆ ಕಾಂಗ್ರೆಸ್ ಪಕ್ಷವು ತನ್ನ ರಾಷ್ಟ್ರ ನಾಯಕರನ್ನು ಅವರ ಕುಟುಂಬವನ್ನು ಒಮ್ಮೆ ತಿರುಗಿ ನೋಡಬೇಕಿದೆ, ಈ ಕುರಿತಾಗಿ ಎರಡೂ ರಾಷ್ಟ್ರೀಯ ಪಕ್ಷಗಳು ಸೇರಿ ಹೊಸ ಕಾನೂನನ್ನು ತರಲಿ ಆ ಕಾನೂನಿಗೆ ನಾವು ಬದ್ಧರಿದ್ದೇವೆ ಎಂದು ಈ ಹಿಂದೆ ಸಂಸದ ಡಿ.ಕೆ ಸುರೇಶ್ ಅವರು ಜೆಡಿಎಸ್ ಪಕ್ಷವನ್ನು ಟೀಕೆ ಮಾಡಿದ್ದಕ್ಕೆ ಪ್ರತ್ಯುತ್ತರ ನೀಡಿದರು.

ಬೆಳೆಹಾನಿಗೆ ಶೀಘ್ರ ಪರಿಹಾರ ದೊರೆಯಬೇಕು :

ರಾಜ್ಯದಲ್ಲಿ ಉಂಟಾಗಿರುವ ಅಕಾಲಿಕ ಮಳೆಯ ಕುರಿತಾಗಿ ಮಾತನಾಡಿದ ರೇವಣ್ಣ ಅವರು ರಾಜ್ಯದ ರೈತರ ಸ್ಥಿತಿ ಬಹಳ ಕಠಿಣವಾಗಿದೆ. ಅವರ ಜೀವನ ನೋವಿನಿಂದ ಕೂಡಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಆದಷ್ಟು ಬೇಗ ಬೆಳೆ ಹಾನಿಗೆ ಪರಿಹಾರಧನ ನೀಡಬೇಕು ಎಂದು ಒತ್ತಾಯಿಸಿದರು. 

ಭ್ರಷ್ಟಾಚಾರದ ವಿರುದ್ಧ ಸಮಗ್ರ ತನಿಖೆಗೆ ಆಗ್ರಹ :

ರಾಜ್ಯದ ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಮತ್ತು ನೀರಾವರಿ ಇಲಾಖೆಯಲ್ಲಿ ಬಹಳ ದೊಡ್ಡ ಹಗರಣಗಳು ನಡೆಯುತ್ತಿದೆ ಈ ಕುರಿತಾಗಿ ಸರ್ಕಾರ ಶೀಘ್ರವಾಗಿ ತನಿಖೆ ನಡೆಸಬೇಕು. ಹೆಚ್ಚಿನ  ಕಾಮಗಾರಿಗಳಲ್ಲಿ ಇಂಜಿನಿಯರ್ ಗಳು ಬೇರೊಬ್ಬರ ಹೆಸರಿನಲ್ಲಿ ಗುತ್ತಿಗೆದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕುರಿತು ಸಮರ್ಪಕವಾದ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥರ ವಿರುದ್ದ ಕಾನೂನಿನ ಅಡಿಯಲ್ಲಿ ಕಠಿಣ  ಶಿಕ್ಷೆಯಾಗಬೇಕೆಂದು ಹೆಚ್.ಡಿ ರೇವಣ್ಣ ಆಗ್ರಹಿಸಿದರು.