ಚಿಕ್ಕಮಗಳೂರು : ಕೆಲದಿನಗಳ ಹಿಂದೆ ಕೆಲಸಕ್ಕೆಂದು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿ ಯೋರ್ವರು ನಿನ್ನೆ ರಾತ್ರಿ ಶವವಾಗಿ ಪತ್ತೆಯಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರುತಳ ಬಳಿ ಕೆಲಸಕ್ಕೆಂದು ಇನ್ನಿತರ ಕೆಲಸಗಾರರೊಂದಿಗೆ ತೆರಳಿದ್ದ ನಾಗೇಶ್ ಆಚಾರ್ ಎಂಬ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ. ನಾಗೇಶ್ ಆಚಾರ್ ಅವರನ್ನು ಕೆಲಸಕ್ಕೆಂದು ಜೀಪಿನಲ್ಲಿ ಕರೆದುಕೊಂಡು ಹೋಗಿದ್ದ ಕೃಷ್ಣೇಗೌಡ ಹಾಗೂ ಇನ್ನಿತರರು ನಾಗೇಶ್ ಆಚಾರ್ ಅವರನ್ನು ಕೊಲೆ ಮಾಡಿ ಮಣ್ಣಿನಡಿಯಲ್ಲಿ ಹೂತಿದ್ದಾರೆ ಎಂದು ತಿಳಿದುಬಂದಿದೆ. 

ಇಷ್ಟು ದಿನಗಳ ಕಾಲ ಪೊಲೀಸರು ಹಾಗೂ ಸ್ಥಳೀಯರೊಂದಿಗೆ ಸೇರಿ ನಾಗೇಶ್ ಆಚಾರ್ ಅವರನ್ನು ಹುಡುಕುವಂತೆ ನಾಟಕ ಮಾಡಿ ಎಲ್ಲರ ದಿಕ್ಕು ತಪ್ಪಿಸುವ ಕೆಲಸವನ್ನು ಕೃಷ್ಣೇಗೌಡ ಮತ್ತು ಇನ್ನಿತರ ಆತನ ಸಹಚರರು ನಾಟಕ ಮಾಡಿ ಪೊಲೀಸರ ದಿಕ್ಕು  ತಪ್ಪಿಸಲು ಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ.


ಕಳೆದ ಐದು ದಿನಗಳಿಂದ ನಾಗೇಶ್ ಆಚಾರ್ ಅವರಿಗಾಗಿ ಕುಟುಂಬ ಸದಸ್ಯರನ್ನೊಳಗೊಂಡಂತೆ ಸ್ಥಳೀಯರು ಪೊಲೀಸ್ ಇಲಾಖೆಯ ಅಧಿಕಾರಿಗಳು ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆದರೆ ನಿನ್ನೆ ರಾತ್ರಿ ನಾಗೇಶ್ ಆಚಾರ್ ಅವರು ಶವವಾಗಿ ದೊರೆತಿದ್ದಾರೆ.

ನಾಗೇಶ್ ಆಚಾರ್ ಅವರ ಪತ್ನಿ ಹಾಗೂ ಕುಟುಂಬಸ್ಥರು ನಾಗೇಶ್ ಅವರನ್ನು ಹುಡುಕಿಕೊಡುವಂತೆ ಬಹಳ ಗೋಗರೆದು ಪ್ರಾರ್ಥಿಸಿದ್ದರು ಆದರೆ ಪ್ರಾರ್ಥನೆ ಈಗ ವ್ಯರ್ಥವಾಗಿದೆ.

ಘಟನೆಯ ಸಂಬಂಧ ಕೃಷ್ಣೇಗೌಡ, ಉದಯ್, ಪ್ರದೀಪ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು  ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳಿಂದ ಘಟನೆಯ ಕುರಿತಾಗಿ ಮಾಹಿತಿ ಪಡೆಯುತ್ತಿದ್ದಾರೆ.

ತನು ಕೊಟ್ಟಿಗೆಹಾರ, ವರದಿಗಾರರು.