ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಿನ ಹೊರವಲಯದ ಗಾಲ್ಫ್ ಕ್ಲಬ್ ನ ಸಮೀಪದ ರಸ್ತೆಯಲ್ಲಿ ಹುಲಿ ಬಂದಿದೆ ಎಂಬ ವದಂತಿಯೊಂದು ಕಾಫಿ ನಾಡಿನಾದ್ಯಂತ ಹಬ್ಬಿದೆ.
ನಿನ್ನೆ ರಾತ್ರಿಯ ಸಮಯದಲ್ಲಿ ಒಂದು ಹುಲಿಯು ಕಾಣಿಸಿದೆ ಎಂದು ಫೋಟೋ ಒಂದನ್ನು ತೆಗೆದು ಕೆಲವರು ರಾತ್ರಿಯೇ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ, ಅದಾದ ಸ್ವಲ್ಪ ಸಮಯದ ನಂತರದಲ್ಲಿ ರಸ್ತೆಯ ಅಕ್ಕ ಪಕ್ಕದಲ್ಲಿ ಎರಡು ಹುಲಿ ಇರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಿಂದ ಕೆಲವರು ಗಾಬರಿ ಗೊಂಡಿದ್ದಾರೆ.
ಹುಲಿಯ ಫೋಟೋವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ಗಾಲ್ಫ್ ಕ್ಲಬ್ ನ ಸದಸ್ಯ ಸಮೀರ್ ಎಂಬ ಸುಳ್ಳು ವದಂತಿಯೂ ಎಲ್ಲೆಡೆ ಹಬ್ಬಿದೆ.
ಸ್ಪಷ್ಟನೆ ನೀಡಿದ ಪರಿಸರವಾದಿಗಳು :
ಹುಲಿಯ ವಿಚಾರವಾಗಿ ಸ್ಪಷ್ಟನೆ ನೀಡಿದ ಪರಿಸರವಾದಿಗಳು ತಮಿಳುನಾಡಿನ ಸತ್ಯಮಂಗಲಂ ನಲ್ಲಿ ಕಾಣಿಸಿದ ಹುಲಿಯ ಫೋಟೋವನ್ನು ಸುಮ್ಮ ಸುಮ್ಮನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜನರನ್ನು ಭಯ ಭೀತರಾಗಿಸುವ ಕೆಲಸ ನಡೆಯುತ್ತಿದೆ. ಜನರ ಜೀವನದೊಂದಿಗೆ ಆಟವಾಡಲು ಈ ರೀತಿಯ ಘಟನೆಗಳನ್ನು ನಡೆಸುತ್ತಿದ್ದಾರೆ. ಈ ಕುರಿತಾಗಿ ಪೊಲೀಸರು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಾನೂನನ್ನು ಸಮರ್ಪಕವಾಗಿ ಬಳಸಿಕೊಂಡು ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ಪೊಲೀಸ್ ಇಲಾಖೆ ಹಾಗೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಜನರು ಭಯಭೀತರಾಗದೆ ಇರಬೇಕು, ಹುಲಿ ಬಂದಿದೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಿದ ಆರೋಪಿಗಳಿಗೆ ಶೀಘ್ರವಾಗಿ ಕಠಿಣ ಶಿಕ್ಷೆಯನ್ನು ಜರುಗಿಸಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಾದ ಅಜಯ್ ಮಿಶ್ರ ಅವರು ತಿಳಿಸಿದ್ದಾರೆ.

0 Comments