ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಇನ್ನೇನು ಕೇವಲ ಬೆರಳೆಣಿಕೆಯ ದಿನಗಳಷ್ಟೇ ವಿಧಾನಪರಿಷತ್ ಚುನಾವಣೆಗೆ ಉಳಿದಿದೆ. ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ರಾಜಕೀಯ ಪಕ್ಷಗಳು ಬಹಳ ತಯಾರಿ ನಡೆಸುತ್ತಿವೆ.
ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎಂ ಕೆ ಪ್ರಾಣೇಶ್ ಸ್ಪರ್ಧೆ ನಡೆಸುತ್ತಿದ್ದರೆ, ಕಾಂಗ್ರೆಸ್ ಪಕ್ಷದಿಂದ ಗಾಯತ್ರಿ ಶಾಂತೇಗೌಡ ಅವರು ಅಭ್ಯರ್ಥಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ನಾಯಕರ ಸಭೆ ಇಂದು ನಡೆಯಿತು, ಈ ಸಭೆಯಲ್ಲಿ ಗಾಯತ್ರಿ ಶಾಂತೇಗೌಡರ ಗೆಲುವಿಗೆ ಜೆಡಿಎಸ್ ಪಕ್ಷವು ಕೂಡ ಶ್ರಮಿಸಲು ಸಿದ್ಧವಿದೆ ಎಂದು ಇಂದು ನಡೆದ ಜೆಡಿಎಸ್ ಸ್ಥಳೀಯ ನಾಯಕರ ಸಭೆಯಲ್ಲಿ ಮಾಜಿ ಶಾಸಕ ವೈ ಎಸ್ ವಿ ದತ್ತ ತಿಳಿಸಿದರು.
ವಿಧಾನಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಗಾಯತ್ರಿ ಶಾಂತೇಗೌಡ ಅವರಿಗೆ ಜೆಡಿಎಸ್ ಪಕ್ಷ ಬೆಂಬಲ ನೀಡಿದೆ, ಈ ಹಿಂದಿನ ಚುನಾವಣೆಗಳಲ್ಲಿ ಜಾತ್ಯಾತೀತ ಜನತಾದಳ ಪಕ್ಷದ ಮತ ವಿಭಜನೆಯ ಕಾರಣದಿಂದಾಗಿ ಬಿಜೆಪಿ ಗೆಲುವು ಸಾಧಿಸಿತ್ತು ಆದರೆ ಮುಂದಿನ ದಿನಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ಸಂಭವ ಇಲ್ಲ ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ, ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ನಿಲುವು ಏನಿದ್ದರೂ ಕೂಡ ಜಾತ್ಯತೀತ ಶಕ್ತಿ ಗೆಲ್ಲಬೇಕು ಎನ್ನುವುದು ಹಾಗೂ ಕೋಮುವಾದಿ ಮನೋಭಾವದ ಪಕ್ಷ ಸೋಲಬೇಕೆನ್ನುವುದು ಜೆಡಿಎಸ್ ನಾಯಕರ ಆಶಯವಾಗಿದೆ. ಆದಕಾರಣ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರಿಗೆ ಬೆಂಬಲ ಘೋಷಿಸಿದೆ ಹಾಗೂ ಜೆಡಿಎಸ್ ನಾಯಕರು ಜಿಲ್ಲಾದ್ಯಂತ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ ಎಂದರು.
ಈ ಸಭೆಯಲ್ಲಿ ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಮರುಗುದ್ದಿ ಮನು, ಜೆಡಿಎಸ್ ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಮುಖಂಡ ಯರದಕೆರೆ ರಾಜಪ್ಪ, ಕಂಸಾಗರ ಶೇಖರಪ್ಪ, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರೇಮ್ ಕುಮಾರ್, ಜಿ.ಬಿ ಪವನ್ ಹಾಗೂ ಇನ್ನಿತರರಿದ್ದರು.

0 Comments