ತೀರ್ಥಹಳ್ಳಿ:(ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನ ಹಲವೆಡೆಗಳಲ್ಲಿ ದಿನೇ ದಿನೇ ದನಗಳ್ಳರ ಹಾವಳಿ ಹೆಚ್ಚಾಗಿದ್ದು ಹಗಲು ರಾತ್ರಿ ಎನ್ನದೆ ನಿರ್ಭೀತವಾಗಿ ಗೋಕಳ್ಳರು ತಮ್ಮ ಕಳ್ಳತನವನ್ನು ಮುಂದುವರೆಸುತ್ತಲೆ ಇದ್ದಾರೆ.
ತೀರ್ಥಹಳ್ಳಿಯ ಮೇಳಿಗೆಯಿಂದ ಅಕ್ರಮವಾಗಿ ದನಗಳನ್ನು ಸಾಗಣೆ ಮಾಡುತ್ತಿರುವ ಕಳ್ಳರನ್ನು ತಡೆಯಲು ಯತ್ನಿಸಿದ ಇಬ್ಬರು ಯುವಕರ ಮೇಲೆ ಪಿಕ್ ಅಪ್ ವಾಹನ ಹರಿದ ಪರಿಣಾಮ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ತಾಲೂಕಿನ ಮೇಳಿಗೆಯಿಂದ ಪಿಕಪ್ ವಾಹನವನ್ನು ಫಾಲೋ ಮಾಡಿಕೊಂಡು ಬಂದ ಯುವಕರ ಮೇಲೆ ಬೆಜ್ಜವಳ್ಳಿಯಲ್ಲಿ ಪಿಕ್ ಅಪ್ ಅನ್ನು ಹತ್ತಿಸಲಾಗಿದೆ. ಕಿರಣ್(23) ಚರಣ್(24) ಎಂಬ ಇಬ್ಬರು ಯುವಕರ ಮೇಲೆ ಪಿಕ್ ಅಪ್ ವಾಹನ ಹತ್ತಿಸಿದ್ದು ಇಬ್ಬರು ಸಹ ಗಂಭೀರ ಗಾಯಗೊಂಡಿದ್ದಾರೆ. ಅಗತ್ಯ ತುರ್ತು ಚಿಕಿತ್ಸೆಗಾಗಿ ಇಬ್ಬರನ್ನು ಕೂಡ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ನಡೆದು ಆಸ್ಪತ್ರೆಗೆ ಯುವಕರನ್ನು ದಾಖಲಿಸಿದ ತಕ್ಷಣ ವಿಷಯ ತಿಳಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿ ಆಸ್ಪತ್ರೆಗೆ ಭೇಟಿ ನೀಡಿ ಇಬ್ಬರು ಯುವಕರ ಹೆಚ್ಚಿನ ಚಿಕಿತ್ಸೆಯಕಡೆಗೆ ಗಮನ ಹರಿಸಿದರು. ಕೂಡಲೇ ಮಣಿಪಾಲ ಆಸ್ಪತ್ರೆಗೆ ರವಾನಿಸುವ ಸಲುವಾಗಿ ವ್ಯವಸ್ಥೆ ಮಾಡಿದರು ಎಂದು ತಿಳಿದುಬಂದಿದೆ.
ದನ ಕಳ್ಳತನ ಮಾಡಿದ ಕಿಡಿಗೇಡಿಗಳನ್ನು ಸುಮ್ಮನೆ ಬಿಡುವುದಿಲ್ಲ ಆದಷ್ಟು ಬೇಗ ಅವರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ರಾಜ್ಯದಲ್ಲಿ ಗೋಹತ್ಯೆಯ ವಿರುದ್ಧವಾಗಿ ಕಠಿಣ ಕಾನೂನು ಕ್ರಮಗಳು ಇದ್ದರೂ ಕೂಡ ಜಿಲ್ಲೆಯಲ್ಲಿ ಎಗ್ಗಿಲ್ಲದೇ ಈ ರೀತಿಯಾದ ಘಟನೆಗಳು ನಡೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಜ್ಜವಳ್ಳಿಯಲ್ಲಿ ನಡೆದ ಈ ದುರ್ಘಟನೆಯನ್ನು ಖಂಡಿಸಿ ಶಿವಮೊಗ್ಗದ ರಾಮ್ ಸೇನಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾರ್ಯಕರ್ತರ ಈ ಸ್ಥಿತಿಗೆ ಕಾರಣ ರಾದವರನ್ನು ಕೂಡಲೇ ಬಂಧಿಸದೆ ಹೋದಲ್ಲಿ ಬೃಹತ್ ಪ್ರತಿಭಟನೆಯನ್ನು ತೀರ್ಥಹಳ್ಳಿಯಲ್ಲಿ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಹಾಗೂ ನಾಳೆ ಬೆಳಗ್ಗೆ ಹತ್ತು ಗಂಟೆಗೆ ಹಿಂದೂ ಕಾರ್ಯಕರ್ತರ ಮೇಲೆ ನಡೆದ ಭೀಕರ ಹಲ್ಲೆಯನ್ನು ಖಂಡಿಸಿ ಹಾಗೂ ಪೊಲೀಸ್ ಇಲಾಖೆಯ ನಿರ್ಲಕ್ಷ್ಯವನ್ನು ಖಂಡಿಸಿ ತೀರ್ಥಹಳ್ಳಿ ಬಜರಂಗದಳವು ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ.

0 Comments