ಬಾಳೆಹೊನ್ನೂರು:(ನ್ಯೂಸ್ ಮಲ್ನಾಡ್ ವರದಿ) ಬಾಂಗ್ಲಾ ವಲಸಿಗರು ಅಕ್ರಮವಾಗಿ ಭಾರತದೇಶದ ಒಳ ನುಸುಳಿ ಮಲೆನಾಡು ಭಾಗದ ತೋಟಗಳಲ್ಲಿ ಕೂಲಿ ಮಾಡುವ ಹೆಸರಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗುವ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇತ್ತೀಚಿನ ದಿನಗಳಲ್ಲಿ ಮಲೆನಾಡು ಭಾಗದ ತೋಟಗಳಲ್ಲಿ ಕೂಲಿ ಕೆಲಸದ ನಿಮಿತ್ತವಾಗಿ ಬರುವ ಬಾಂಗ್ಲಾ ವಲಸಿಗರು ಹಿಂದೂ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ, ಇತ್ತ ತೋಟದ ಆಸುಪಾಸಿನಲ್ಲಿ ಮೇಯುವ ಹಸುಗಳ ಮಾರಣ ಹೋಮವು ಒಂದೆಡೆ ನಡೆಯುತ್ತಿದ್ದು ಇದನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೆ ಆರೋಪಿಗಳನ್ನು ಸೆರೆಹಿಡಿದಿಲ್ಲ ಎಂದು ಆರೋಪಮಾಡಿ ತೀವ್ರವಾದ ಪ್ರತಿಭಟನೆ ನಡೆಸಿದರು.

ಗೋಹತ್ಯೆ ಮಾಡಿದ ಆರೋಪಿಗಳು ಸಿಕ್ಕಿಬಿದ್ದರು ಕೂಡ ಅವರ ಮೇಲೆ ಕ್ರಮಗಳನ್ನು ಕೈಗೊಂಡಿಲ್ಲ, ಶೀಘ್ರವಾಗಿ ಹಿಂದೂ ಧರ್ಮದ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಅಕ್ರಮ ಬಾಂಗ್ಲಾ ವಲಸಿಗರ ಮೇಲೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಹಾಗೂ ಜಿಲ್ಲೆಯಲ್ಲಿರುವ ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಈ ಕೂಡಲೇ ಪತ್ತೆ ಹಚ್ಚುವ ಕೆಲಸವನ್ನು ಮಾಡಿ ಅವರ ಮೇಲೆ ತೀವ್ರ ಕ್ರಮಗಳನ್ನು ಕೈಗೊಳ್ಳಬೇಕೆಂದು ಬಜರಂಗದಳದ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಈ ಪ್ರತಿಭಟನೆಯಲ್ಲಿ ಪ್ರಮುಖರಾದ ಪ್ರವೀಣ್ ಖಾಂಡ್ಯ, ಶಿವು ಖಾಂಡ್ಯ, ಗೋಪಾಲ ಹುಣಸೆಹಳ್ಳಿ, ಸಂದೇಶ್ ಉಜ್ಜಿನಿ, ರಜಿತ್ ಗುಡ್ಡೆಕೊಪ್ಪ, ಪೂರ್ಣೇಶ್ ಉಜ್ಜಿನಿ, ಮಂಜೇಶ್ ಕಡಬಗೆರೆ, ರಂಜಿತ್ ಮಾಗಲು, ಹಾಗೂ ಇನ್ನಿತರ ಬಜರಂಗದಳದ ಕಾರ್ಯಕರ್ತರು ಭಾಗವಹಿಸಿದ್ದರು.