ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಸರ್ಕಾರಿ ಅಧಿಕಾರಿಯೊಬ್ಬರು ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ಪಕ್ಷದ ವಿಧಾನಸಭಾ ಅಭ್ಯರ್ಥಿಯ ಬಿ.ಫಾರಂ ಪಡೆದು ಈ ಹಿಂದೆ ಸರ್ಕಾರದ ನಿಯಮವನ್ನು ಉಲ್ಲಂಘನೆ ಮಾಡಿದ್ದರು. ಈ ಕುರಿತಾಗಿ ಬಿಜೆಪಿಯು ದೂರು ಸಹ ದಾಖಲು ಮಾಡಿತ್ತು.
ಚಿಕ್ಕಮಗಳೂರು ಜಿಲ್ಲೆಯ ವಿಧಾನಸಭಾ ಅಭ್ಯರ್ಥಿಯಾಗಿ ಈ ಬಾರಿ ಗಾಯತ್ರಿ ಶಾಂತೇಗೌಡ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಪಕ್ಷವು ಅವರಿಗೆ ನೀಡುವ ಬಿ.ಫಾರಂ ಅನ್ನು ಸರ್ಕಾರಿ ಅಧಿಕಾರಿ ಪಡೆದಿದ್ದಾರೆ ಇದು ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದಂತೆ ಎಂದು ಬಿಜೆಪಿ ಪಕ್ಷವು ಚುನಾವಣಾಧಿಕಾರಿಗಳಿಗೆ ಹಾಗೂ ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು.
ದೂರಿನ ಮೇರೆಗೆ ಅಬಕಾರಿ ಇಲಾಖೆಯ ಜಾರಿ ಅಧಿಕಾರಿ ಬಿ.ಎಂ ಸುನೀಲ್ ಮೇಲೆ ಬೆಂಗಳೂರಿನ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಂದ ಗಾಯತ್ರಿ ಶಾಂತೇಗೌಡ ಅವರ ಪರವಾಗಿ ಬಿ.ಫಾರಂ ಅನ್ನು ಸುನೀಲ್ ಪಡೆದಿದ್ದರು. ಅವರು ಬಿ ಫಾರಂ ಪಡೆಯುವ ಫೋಟೋವನ್ನು ಕಾಂಗ್ರೆಸ್ ನ ಕೆಲ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ನಿಯಮ ಉಲ್ಲಂಘನೆಯ ಕುರಿತಾಗಿ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಸೇರಿದಂತೆ ಹಲವೆಡೆಗಳಿಂದ ದೂರು ದಾಖಲಾಗಿತ್ತು. ದೂರಿನ ಅನ್ವಯ ಅಬಕಾರಿ ಇಲಾಖೆಯ ಅಧಿಕಾರಿ ಸುನೀಲ್ ಮೇಲೆ ಪ್ರಕರಣ ದಾಖಲಾಗಿದೆ.

0 Comments