ಮೂಡಿಗೆರೆ : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಎಂ.ಜಿ.ಎಂ ಸರ್ಕಾರಿ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಘಟಕದ ಯಂತ್ರವು ಕೆಟ್ಟುಹೋಗಿ ಇಲ್ಲಿನ ರೋಗಿಗಳಿಗೆ ತೀವ್ರ ಸಮಸ್ಯೆ ಉಂಟಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.
ಡಯಾಲಿಸಿಸ್ ಘಟಕದ ಯಂತ್ರವು ಕೆಟ್ಟು ಹೋಗಿ 07 ದಿನಗಳು ಕಳೆದರೂ ಕೂಡ ಅದನ್ನು ಸರಿಪಡಿಸಲಾಗಿಲ್ಲ ಎಂದು ರೋಗಿಗಳು ತಮಗಾಗುತ್ತಿರುವ ಗಂಭೀರ ಸಮಸ್ಯೆಯನ್ನು ಹೊರಹಾಕಿದ್ದಾರೆ, ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿ ಕೊಡಬೇಕೆಂದು ಮನವಿ ಮಾಡಿದ್ದಾರೆ.
ಜಿಲ್ಲೆಯ ಎಲ್ಲಾ ಡಯಾಲಿಸಿಸ್ ಘಟಕಗಳನ್ನು ನಿರ್ವಹಣೆ ಮಾಡಲು ಸರ್ಕಾರವು ಖಾಸಗಿ ಸಂಸ್ಥೆಗಳಿಗೆ ವಹಿಸಿದೆ, ಆದರೆ ಡಯಾಲಿಸಿಸ್ ಘಟಕದ ಸಿಬ್ಬಂದಿಗಳಿಗೆ ನಾಲ್ಕು ತಿಂಗಳುಗಳಿಂದ ಸಂಬಳ ಸಂದಾಯವಾಗದ ಕಾರಣ ಈ ರೀತಿಯಾದ ಸಮಸ್ಯೆಗಳು ತಲೆದೋರಿದೆ. ಸಮಸ್ಯೆಯ ಕುರಿತಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹಾರ ಮಾಡಲು ಪ್ರಯತ್ನಿಸುತ್ತೇನೆ. - ಎಂ.ಪಿ ಕುಮಾರಸ್ವಾಮಿ, ಶಾಸಕರು ಮೂಡಿಗೆರೆ ವಿಧಾನಸಭಾ ಕ್ಷೇತ್ರ.
ಡಯಾಲಿಸಿಸ್ ಘಟಕದ ಯಂತ್ರ ಹಾಳಾಗಿರುವ ಕಾರಣ ಬರುವ ರೋಗಿಗಳಿಗೆ ಬಹಳ ಸಮಸ್ಯೆ ಉಂಟಾಗುತ್ತಿದೆ, ಈ ಹಿಂದೆ ಡಯಾಲಿಸಿಸ್ ಘಟಕವು ಏಜೆನ್ಸಿ ಗೆ ಒಳಪಟ್ಟಿತ್ತು, ಪ್ರಸ್ತುತ ಏಜೆನ್ಸಿ ಅವರು ಸಹ ಸರ್ಕಾರಕ್ಕೆ ಈ ಕುರಿತು ತಿಳಿಸಿದ್ದಾರೆ. ನಾವು ಕೂಡ ಈ ಕುರಿತಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಒಂದು ವಾರದಿಂದ ಹದಿನೈದು ದಿನಗಳ ಒಳಗೆ ಹಾಳಾಗಿರುವ ಲೆದರ್ ಪೈಪ್ ಅನ್ನು ಸರಿಮಾಡಲಾಗುವುದು. - ಡಾ. ಶಾಂಭವಿ ವೈದ್ಯಾಧಿಕಾರಿಗಳು ಮೂಡಿಗೆರೆ.
ವಾರಕ್ಕೆ ಎರಡು ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುವ ರೋಗಿಗಳಿಗೆ ಇದರಿಂದಾಗಿ ಬಹಳ ಸಮಸ್ಯೆ ಉಂಟಾಗುತ್ತಿದ್ದು ಆದಷ್ಟು ಬೇಗ ಆಸ್ಪತ್ರೆಯ ಮಂಡಳಿ ಹಾಗೂ ಶಾಸಕರು ಮತ್ತು ಸ್ಥಳೀಯ ಜನ ಪ್ರತಿನಿಧಿಗಳು ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.
ರೋಗಿಗಳ ದೇಹದಲ್ಲಿ ನೀರು ಹಾಗೂ ಇತರೆ ತ್ಯಾಜ್ಯಗಳು ಹೊರ ಹೋಗದೆ ಶ್ವಾಸ ಕೋಶದಲ್ಲಿ ನೀರು ತುಂಬಿ ಉಸಿರಾಟದ ಸಮಸ್ಯೆಯನ್ನು ಹಲವಾರು ರೋಗಿಗಳು ಅನುಭವಿಸುತ್ತಿದ್ದಾರೆ.18 ರೋಗಿಗಳಿಗೆ ಇದರಿಂದ ತೀವ್ರ ತೊಂದರೆ ಎದುರಾಗಿದ್ದು , ಆಸ್ಪತ್ರೆ ಮಂಡಳಿ ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ತಕ್ಷಣ ಡಯಾಲಿಸಿಸ್ ಯಂತ್ರವನ್ನು ಸರಿಪಡಿಸಬೇಕು. - ಸುದರ್ಶನ್ ಸ್ಥಳೀಯರು.
ತನು ಕೊಟ್ಟಿಗೆಹಾರ, ವರದಿಗಾರರು.

0 Comments