ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯಲ್ಲಿ 100 ಬೆಡ್ ಆಸ್ಪತ್ರೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಕಳೆದ ಒಂದೂವರೆ ವರ್ಷದಿಂದ ನಿರಂತರ ಹೋರಾಟ ಸಾಗಿದೆ.

ಇತ್ತೀಚೆಗಷ್ಟೇ ಶೃಂಗೇರಿ ಬಂದ್ ಗೆ ಕರೆ ನೀಡಿ ಯಶಸ್ವಿಯಾಗಿ ಬಂದ್ ನಡೆದಿತ್ತು, ಅಧಿಕಾರಿಗಳು ತಿಂಗಳೊಳಗೆ ಜಾಗ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದರು. ಹೇಳಿದಂತೆ ಒಂದು ತಿಂಗಳಿನೊಳಗೆ ಜಾಗದ ಸಮಸ್ಯೆಯು ಇತ್ಯರ್ಥವಾಗದೇ ಹೋದಲ್ಲಿ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಅಂದೇ ಹೋರಾಟ ಸಮಿತಿಯು ಎಚ್ಚರಿಕೆ ನೀಡಿತ್ತು. ಅಂತೆಯೇ ಮುಂದಿರುವ ವಿಧಾನಪರಿಷತ್ ಚುನಾವಣೆಯನ್ನು ಬಹಿಷ್ಕರಿಸುವಂತೆ ತಾಲೂಕಿನ ಎಲ್ಲಾ ಚುನಾಯಿತ ಪ್ರತಿನಿಧಿಗಳನ್ನು ಈ ಹಿಂದೆ ಮನವಿ ಮಾಡಿತ್ತು.

ಈಗ ಶೃಂಗೇರಿಯ ಇಬ್ಬರು ಚುನಾಯಿತ ಪ್ರತಿನಿಧಿಗಳು ವಿಧಾನಪರಿಷತ್ತು ಚುನಾವಣೆಯನ್ನು ಬಹಿಷ್ಕರಿಸಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಶೃಂಗೇರಿಯ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿಯ ಸದಸ್ಯ ಶಬರೀಶ್ ಹಾಗೂ ಶೃಂಗೇರಿ ಪಟ್ಟಣ ಪಂಚಾಯಿತಿಯ ಮೊದಲನೇ ವಾರ್ಡಿನ ಸದಸ್ಯ ರಫೀಕ್ ಅಹಮದ್ ಚುನಾವಣಾ ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದಾರೆ.

ಈ ಹಿಂದೆ 100 ಬೆಡ್ ಆಸ್ಪತ್ರೆಗಾಗಿ ಆಗ್ರಹಿಸಿ ಶೃಂಗೇರಿ ಬಂದ್ ಗೆ ಆಸ್ಪತ್ರೆ ಹೋರಾಟ ಸಮಿತಿಯು ಕರೆ ನೀಡಿದ್ದ ಬಂದ್ ಗೆ ಹಲವಾರು ರಾಜಕೀಯ ಮುಖಂಡರು ಹಾಗೂ ಕೆಲ ಸ್ಥಳೀಯ ನಾಯಕರು ಬಹಳ ಹುರುಪಿನಿಂದ ಮುಂದೆ ಬಂದಿದ್ದರು, ಆದರೆ ಜನರಿಗೆ ಅತ್ಯಾವಶ್ಯಕವಾಗಿರುವ ಆಸ್ಪತ್ರೆ ಇನ್ನೂ ಆಗದೇ ಇರುವುದು ರಾಜಕೀಯ ನಾಯಕರ ದೌರ್ಬಲ್ಯದಿಂದ. ಸರ್ವರು ಒಗ್ಗೂಡಿ ಬಿಸಿ ಮುಟ್ಟಿಸುವ ಸಲುವಾಗಿ ಈ ಬಾರಿಯ ವಿಧಾನಪರಿಷತ್ ಚುನಾವಣೆಯನ್ನು ಬಹಿಷ್ಕಾರ ಮಾಡಬೇಕು.

ಸಾರ್ವಜನಿಕರು ನಮ್ಮನ್ನು ಆರಿಸಿರುವುದು ಜನರ ಸೇವೆಗಾಗಿ ಮೊದಲು ಇದನ್ನು ಎಲ್ಲಾ ಜನಪ್ರತಿನಿಧಿಗಳು ಅರ್ಥೈಸಿಕೊಳ್ಳಬೇಕು. ಆಸ್ಪತ್ರೆ ಸರ್ವರಿಗೂ ಅತ್ಯಾವಶ್ಯಕವಾಗಿರುವುದು ಹಣವಿದ್ದರೂ ಕೂಡ ಈ ಭಾಗದ ಜನರಿಗೆ ಉತ್ತಮ ಆರೋಗ್ಯ ಸವಲತ್ತುಗಳನ್ನು ಪಡೆಯಲು ಅಸಾಧ್ಯವಾಗಿದೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಗುವವರೆಗೂ ಈ ಹೋರಾಟದಲ್ಲಿ ನಿರಂತರವಾಗಿ ನಾನು ಪಾಲ್ಗೊಳ್ಳುತ್ತೇನೆ ಎಂದು ಸದಸ್ಯ ರಫೀಕ್ ಅಹಮದ್ ತಿಳಿಸಿದರು.

ಶೃಂಗೇರಿಯಲ್ಲಿ 100 ಬೆಡ್ ಗಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕು ಎಂಬ ಬೇಡಿಕೆಯನ್ನು ಸರ್ಕಾರ ಹಾಗೂ ಎಲ್ಲಾ ಜನಪ್ರತಿನಿಧಿಗಳ ಮುಂದೆ ಇಟ್ಟು ಹೋರಾಟ ಮಾಡುತ್ತಿರುವ ಶೃಂಗೇರಿಯ ಯುವಜನತೆ ಹಾಗೂ ಸಾರ್ವಜನಿಕರಿಗೆ ಶೃಂಗೇರಿಯ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಸದಸ್ಯನಾಗಿರುವ ನಾನು ಸಂಪೂರ್ಣ ಬೆಂಬಲವನ್ನು ವ್ಯಕ್ತ ಪಡಿಸುವ ಜೊತೆಗೆ ಯುವಜನತೆಯ ಹೋರಾಟಕ್ಕೆ ಕೈ ಜೋಡಿಸುತ್ತೇನೆ ಹಾಗೂ ಈ ಮೂಲಕ ನಾನು ಶೃಂಗೇರಿಯ ಪ್ರತಿ ಗ್ರಾಮ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರೆಲ್ಲರಿಗೂ ಮನವಿ ಮಾಡಿಕೊಳ್ಳುವುದೇನೆಂದರೆ ನಮ್ಮ ಶೃಂಗೇರಿಯ ಯುವಜನರ ಹಾಗೂ ಸಾರ್ವಜನಿಕರ ಪರವಾಗಿ ನಿಲ್ಲಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ ಹಾಗಾಗಿ ನಾವೆಲ್ಲರೂ ಶೃಂಗೇರಿಯಲ್ಲಿ ಹೋರಾಟ ಮಾಡುತ್ತಿರುವ ಯುವಜನರ ಹಾಗೂ ಸಾರ್ವಜನಿಕರ ಜೊತೆ ಒಮ್ಮತದಿಂದ ಸೇರಿ ಶೃಂಗೇರಿಯಲ್ಲಿ 100ಬೆಡ್ ಗಳ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಆಗೋವರೆಗೆ ವಿಧಾನ ಪರಿಷತ್ ಚುನಾವಣೆಯನ್ನು ಬಹಿಷ್ಕಾರ ಹಾಕಿ ಸಹಕಾರ ನೀಡೋಣ ಎಂದು ಶಬರೀಶ್ ಹೇಳಿದ್ದಾರೆ.

ಚುನಾವಣೆಯ ದಿನ ಬೆಳಗಿನವರೆಗೂ ಕಾಯುತ್ತೇವೆ, ತಾಲೂಕಿನ ಎಲ್ಲಾ ಪ್ರತಿನಿಧಿಗಳು ಒಮ್ಮತದಿಂದ ನಮ್ಮ ಮನವಿಗೆ ಸ್ಪಂದಿಸಿದರೆ ನಾವು ಚುನಾವಣೆ ಬಹಿಷ್ಕಾರ ಮತ್ತು ಶೃಂಗೇರಿ ಬಂದ್ ಮಾಡೋಕೆ ಸಹ ಸಿದ್ದ, ಯಾರೂ ಬೆಂಬಲವಾಗಿ ನಿಲ್ಲದೆ ಎಲ್ಲರೂ ಓಟ್ ಮಾಡ್ತಾರೆ ಅಂದ್ರೆ ಮಾತ್ರ ನಾವೂ ಮತದಾನ ಮಾಡ್ತೀವಿ. ಎಲ್ಲ ಜನ ಪ್ರತಿನಿಧಿಗಳ ಮನವೊಲಿಸಿ ಚುನಾವಣೆ ಬಹಿಷ್ಕಾರ ಹಾಕಿಸಬೇಕಾದ ಹೊಣೆ ಓಟು ಹಾಕಿ ಗೆಲ್ಲಿಸಿದ ಜನರದ್ದು. - ಶಬರೀಶ್ ವಿದ್ಯಾರಣ್ಯಪುರ ಗ್ರಾಮ ಪಂಚಾಯ್ತಿ ಸದಸ್ಯ.

ಸಾರ್ವಜನಿಕರಿಗಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಊರಿಗೆ ಅತ್ಯಾವಶ್ಯಕವಾಗಿರುವ ಸುಸಜ್ಜಿತ 100 ಬೆಡ್ ಗಳ ಆಸ್ಪತ್ರೆ ನಿರ್ಮಾಣವಾಗುವಲ್ಲಿ ಸಕ್ರಿಯ ಪಾಲುದಾರರಾಗಿರೋಣ ಎಂದು ಇಬ್ಬರು ಸದಸ್ಯರೂ ಮನವಿ ಮಾಡಿದ್ದಾರೆ.