ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ದತ್ತ ಜಯಂತಿ ಅಂಗವಾಗಿ ಜಿಲ್ಲೆಯಾದ್ಯಂತ ಇಂದಿನಿಂದ ಡಿಸೆಂಬರ್ 19 ರವರೆಗೆ ದತ್ತಮಾಲಾ ಅಭಿಯಾನ ಆರಂಭವಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಗಿರಿಶ್ರೇಣಿಯ ತಪ್ಪಲಿನಲ್ಲಿರುವ ಶ್ರೀಗುರು ದತ್ತಾತ್ರೇಯ ಪೀಠಕ್ಕೆ ದತ್ತ ಮಾಲೆಯನ್ನು ಧರಿಸಿ ದತ್ತಭಕ್ತರು ಪ್ರತಿವರ್ಷವೂ ಆಗಮಿಸುವುದು ವಾಡಿಕೆ. ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಇಂದು ದತ್ತಮಾಲಾ ಅಭಿಯಾನಕ್ಕೆ ಚಾಲನೆ ದೊರೆತಿದೆ.

ಚಿಕ್ಕಮಗಳೂರು ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ಇಂದು ಬೆಳಗ್ಗೆ ಬಜರಂಗದಳದ ಇನ್ನೂರಕ್ಕೂ ಅಧಿಕ ದತ್ತ ಭಕ್ತರು ಹಾಗೂ ಬಜರಂಗದಳದ ಕಾರ್ಯಕರ್ತರು ದತ್ತ ಮಾಲೆಯನ್ನು ಧರಿಸಿ ವ್ರತಾಚರಣೆಯನ್ನು ಆರಂಭಿಸಿದ್ದಾರೆ. ಡಿಸೆಂಬರ್ 19ರ ವರೆಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ದತ್ತಪೀಠದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

ಶೃಂಗೇರಿಯಲ್ಲಿ ದತ್ತಮಾಲಾ ಧರಿಸಿದ ಬಜರಂಗದಳದ ಕಾರ್ಯಕರ್ತರು :

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ದತ್ತಮಾಲಾ ಅಭಿಯಾನಕ್ಕೆ ಚಾಲನೆ ದೊರೆತಿದೆ, ಪಟ್ಟಣದ ಚಪ್ಪರದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬಜರಂಗದಳದ ಕಾರ್ಯಕರ್ತರು ದತ್ತ ಮಾಲೆಯನ್ನು ಧರಿಸಿ ವ್ರತಾಚರಣೆಯ ಸಂಕಲ್ಪವನ್ನು ಮಾಡಿದ್ದಾರೆ. ಇದೇ ಡಿಸೆಂಬರ್ 15 ರ ಭಾನುವಾರದಂದು ಹಿಂದೂ ಶಕ್ತಿ ಸಂಗಮ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಈ ಕಾರ್ಯಕ್ರಮದಲ್ಲಿ ಬಾಲವಾಗ್ಮಿ ಕುಮಾರಿ ಹಾರಿಕಾ ಮಂಜುನಾಥ್ ಉಪಸ್ಥಿತರಿರಲಿದ್ದಾರೆ ಎಂದು ಬಜರಂಗದಳ ಶೃಂಗೇರಿ ಘಟಕ ತಿಳಿಸಿದೆ.

ಇಂದಿನಿಂದ ಡಿಸೆಂಬರ್ 19 ರವರೆಗೆ ಶ್ರದ್ಧಾಭಕ್ತಿಯಿಂದ ರಾಜ್ಯದಾದ್ಯಂತ ದತ್ತಮಾಲಾ ಅಭಿಯಾನ ಯಶಸ್ವಿಯಾಗಿ ನಡೆಯಲಿದೆ ಎಂದು ಬಜರಂಗದಳದ ಪ್ರಮುಖರು ತಿಳಿಸಿದರು.