ಮಲೆನಾಡು : (ನ್ಯೂಸ್ ಮಲ್ನಾಡ್ ವರದಿ) ಭೂ ಕಂದಾಯ ಕಾಯ್ದೆ 192 - ಎ ಸಡಿಲಗೊಳಿಸಿ ಗ್ರಾಮೀಣ ಪ್ರದೇಶಗಳಿಗೆ ವಿನಾಯಿತಿ ನೀಡುವಂತೆ ಶಾಸಕ ಕೆ.ಜಿ ಬೋಪಯ್ಯ ಅವರು ಮನವಿ ಮಾಡಿದ್ದಾರೆ.
ಕಂದಾಯ ಸಚಿವ ಆರ್ ಅಶೋಕ್ ಅವರಿಗೆ ಮನವಿ ಸಲ್ಲಿಸಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಾಗೂ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾದ ಕೆ.ಜಿ ಬೋಪಯ್ಯ ಅವರು ಭೂ ಕಂದಾಯ ಕಾಯ್ದೆ 192 - ಎ ಸಡಿಲಗೊಳಿಸಿದರೆ ಅಥವಾ ತಿದ್ದುಪಡಿ ಮಾಡಿದರೆ ಗ್ರಾಮೀಣ ಭಾಗಗಳ ಅನೇಕ ಕೃಷಿಕರಿಗೆ ಸಹಾಯವಾಗುತ್ತದೆ ಎಂದು ತಿಳಿಸಿದರು. ಬಹಳ ಹಿಂದಿನಿಂದ ಜೀವನೋಪಾಯಕ್ಕಾಗಿ ಕೃಷಿಯನ್ನು ಆಧರಿಸಿ ಜೀವನ ನಡೆಸುತ್ತಿರುವ ಅನೇಕ ರೈತರು ತೊಂದರೆಗೀಡಾಗಿದ್ದಾರೆ, ಒಂದುವೇಳೆ ವಿನಾಯಿತಿ ನೀಡಿದಲ್ಲಿ ಅವರ ಜೀವನ ಒಂದು ಉತ್ತಮ ಹಂತಕ್ಕೆ ತಲುಪುತ್ತದೆ ಸುಸ್ಥಿರವಾಗುತ್ತದೆ ಎಂದರು ಮತ್ತು ಭೂ ಕಂದಾಯ ಕಾಯ್ದೆ 192 - ಎ ಸಡಿಲಗೊಳಿಸಿ ವಿನಾಯಿತಿ ನೀಡುವಂತೆ ಕಂದಾಯ ಸಚಿವರಿಗೆ ಒತ್ತಾಯಿಸಿದರು.
ಅಂತೆಯೇ ಮಲೆನಾಡು ಭಾಗಗಳಾದ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಬಹಳ ಹಿಂದಿನಿಂದಲೂ ಕಾಫಿ ಬೆಳೆಗಾರರು ಕಂದಾಯ ಜಮೀನುಗಳನ್ನು ಒತ್ತುವರಿ ಮಾಡಿಕೊಂಡು ಸಾಗುವಳಿ ನಡೆಸುತ್ತಿದ್ದಾರೆ, ಈ ಭಾಗದ ಬೆಳೆಗಾರರಿಗೆ ಕನಿಷ್ಠ ಗುತ್ತಿಗೆ ಆಧಾರದಲ್ಲಿ ಜಮೀನುಗಳನ್ನು ಮಂಜೂರು ಮಾಡಬೇಕೆಂದು ಕಂದಾಯ ಸಚಿವ ಆರ್ ಅಶೋಕ್ ಅವರನ್ನು ಕೋರಿದರು.
ಗ್ರಾಮೀಣ ಪ್ರದೇಶಗಳ ರೈತರಿಗೆ ಹಾಗೂ ಕಾಫಿ ಬೆಳೆಗಾರರಿಗೆ ದೊಡ್ಡ ಸಮಸ್ಯೆಯಾಗಿರುವ ಈ ಕಾಯ್ದೆಯನ್ನು ಸಡಿಲಮಾಡಿ ಆದಷ್ಟು ಶೀಘ್ರವಾಗಿ ಇತ್ಯರ್ಥ ಮಾಡಬೇಕೆಂದು ಶಾಸಕ ಕೆ.ಜಿ ಬೋಪಯ್ಯರವರು ಸರ್ಕಾರದ ಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

0 Comments