ಚಿಂತಕರ ಚಾವಡಿ ಎಂದು ಕರೆಯುವ ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಚಾವಡಿ ಸೇರಲು ರಾಜಕೀಯ ಪಕ್ಷಗಳು ಭ್ರಷ್ಟ ಮಾರ್ಗ ಹಿಡಿದಿವೆ.ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎನ್ನಬಹುದು.
ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗದಲ್ಲಿ ರಾಜಕೀಯ ಪಕ್ಷಗಳಿಂದ ಭರ್ಜರಿ ಬೇಟೆ ನಡೆಯುತ್ತಿದೆ.
ಓಟಿಗೆ 50 ಸಾವಿರ ಫಿಕ್ಸ್, ಪಕ್ಷ ನಿಷ್ಠೆ ಬಿಟ್ಟರೆ 1 ಲಕ್ಷ ಗ್ಯಾರೆಂಟಿ:
ಕೊಡಗು, ಹಾಸನ ಹಾಗೂ ಶಿವಮೊಗ್ಗದಲ್ಲಿ ಓಟಿಗೆ ನೇರವಾಗಿ ಐವತ್ತು ಸಾವಿರ ಫಿಕ್ಸ್ ಮಾಡಲಾಗಿದೆ, ಚಿಕ್ಕಮಗಳೂರಿನಲ್ಲಿ ಮೊದಲನೇ ಹಂತವಾಗಿ ಇಪ್ಪತ್ತು ಸಾವಿರ ನೀಡಿದ್ದು ಎದುರಾಳಿ ಪಕ್ಷದವರು ಎರಡನೇ ಸುತ್ತಿಗೆ ಎಷ್ಟು ನೀಡುತ್ತಾರೆ ಎಂದು ಕಾದು ನೋಡುವ ತಂತ್ರವನ್ನು ಕೆಲವೆಡೆ ಪಕ್ಷಗಳು ಅನುಸರಿಸುತ್ತಿದೆ. ಒಟ್ಟಾರೆ 50 ಫಿಕ್ಸ್ ಎನ್ನುತ್ತವೆ ಪಕ್ಷಗಳ ಮೂಲಗಳು. ಇನ್ನು ಪಕ್ಷ ಬಿಟ್ಟು ಮತದಾನ ಮಾಡಿದರೆ ಹಾಗೂ ಪಕ್ಷೇತರ ಅಭ್ಯರ್ಥಿ ಓಟು ಹಾಕಿದಲ್ಲಿ ಅವರಿಗೆ 1 ಲಕ್ಷ ಗ್ಯಾರಂಟಿ.
ಬ್ರೋಕರ್ ಗೆ ಹತ್ತು ಸಾವಿರ:
ಪಕ್ಷೇತರ ಅಭ್ಯರ್ಥಿ ಹಾಗೂ ಇತರೆ ಪಕ್ಷದ ಅಭ್ಯರ್ಥಿಗಳನ್ನು ಕರೆತಂದಲ್ಲಿ ಬ್ರೋಕರ್ ಗೆ ಹತ್ತು ಸಾವಿರ ಹಣವನ್ನು ಸಹ ನೀಡಲಾಗುತ್ತಿದೆ. ಇದೊಂದು ರೀತಿಯಲ್ಲಿ ಬಾಂಬೆಯ ರೆಡ್ ಲೈಟ್ ಏರಿಯಾದ ವ್ಯವಹಾರಕ್ಕೆ ಸೆಡ್ಡು ಹೊಡೆಯುವಂತಿದೆ.
ದೇವರು, ಹೆಂಡತಿ ಮಕ್ಕಳ ಮೇಲೆ ಪ್ರಮಾಣ:
ಇನ್ನು ಲಕ್ಷ ಲಕ್ಷ ಕೊಟ್ಟ ನಾಯಕರು ಹಣ ಪಡೆದವರಿಂದ ದೇವರ ಮೇಲೆ ಹಾಗೂ ಹೆಂಡತಿ ಮಕ್ಕಳ ಮೇಲೆ ಪ್ರಮಾಣ ಮಾಡಿಸಿಕೊಳ್ಳುತ್ತಿದ್ದಾರೆ. ಹಿಂಗಂತ ಮೊದ್ಲೇ ಗೊತ್ತಿದ್ರೆ ಎರಡನೇ ಮದ್ವೆನೂ ಆಗಿರ್ತಿದ್ದೆ ಎಂಬ ಭಾವ ಪ್ರತಿನಿಧಿಗಳ ಮುಖದಲ್ಲಿ ಕಾಣುತ್ತಿದೆ.
ಅತ್ತ ತಪ್ಪು ಕಾಣಿಕೆ ಇಟ್ಟು ಉಲ್ಟಾ ಹೊಡೆಯುತ್ತಾರಾ ಅಥವಾ ಆಣೆಗೆ ಹೆದರಿ ದುಡ್ಡು ಕೊಟ್ಟವರಿಗೇ ಓಟು ಹಾಕುತ್ತಾರಾ ಯಾರು ಬಲ್ಲವರು.
ಭ್ರಷ್ಟಾಚಾರ ವಿರೋಧಿ ದಿನವೂ ಹಣದ ಹೊಳೆ:
ಇಂದು ಭ್ರಷ್ಟಾಚಾರ ವಿರೋಧಿ ದಿನ, ಆದರೆ ಈ ದಿನವೂ ವ್ಯವಹಾರ ಜೋರಾಗಿ ನಡೆಯುತ್ತಿದೆ. ಚುನಾವಣೆ ಆಯೋಗ ಅಂತೂ ಪರಿಷತ್ ಚುನಾವಣೆ ಪ್ರಯುಕ್ತ ಫಾರಿನ್ ಟ್ರಿಪ್ ಹೋದಂತೆ ಕಾಣುತ್ತಿದೆ.
ಊರಿನ ಅಭಿವೃದ್ಧಿ ಕೆಲಸಕ್ಕೆ ಕರೀಬೇಡಿ, ದಂಧೆ ಮಾಡೋವಾಗ ನಮ್ಮನ್ನ ಮರೀಬೇಡಿ:
ಊರಿನ ರಸ್ತೆ, ಆಸ್ಪತ್ರೆ, ಬಸ್ ವ್ಯವಸ್ಥೆ, ಅವೈಜ್ಞಾನಿಕ ಯೋಜನೆಗಳು, ರೈತರ ಸಮಸ್ಯೆಗಳು ಹಾಗೂ ಹತ್ತು ಹಲವು ಸಮಸ್ಯೆಗಳ ಬಗ್ಗೆ ಉಸಿರೆತ್ತದ ಸ್ಥಳೀಯ ರಾಜಕೀಯ ನಾಯಕರುಗಳು. ದಂಧೆ ಸಮಯದಲ್ಲಿ ಮಾತ್ರ ನಮ್ಮನ್ನು ಮರೀಬೇಡಿ ಎಂದು ಪಕ್ಷದ ವರಿಷ್ಠರ ಶರ್ಟು ಹಿಡಿದು ನೇತಾಡುತ್ತಿದ್ದಾರೆ. ಇವರನ್ನು ನಂಬಿ ಮತ ಹಾಕುವ ಜನರಿಗೆ ಮಾತ್ರ ಚುನಾವಣೆ ಸಮಯದಲ್ಲಿ ನೀಡುವ ಎರಡು ಕ್ವಾಟರ್ ಚೀಪರ್ ಬ್ರ್ಯಾಂಡಿ, ಐನೂರು ರೂಪಾಯಿ ನೋಟೇ ಗತಿ.
ಕೋಟಿ ಕೋಟಿ ಹಂಚಿ, ಗೆದ್ದ ನಂತರ ಭ್ರಷ್ಟಾಚಾರ ರಹಿತ ಆಡಳಿತ ಹೇಗೆ ಸಾಧ್ಯ?
ಗೆದ್ದ ನಂತರ ವಿಧಾನ ಪರಿಷತ್ ಸದಸ್ಯರಿಗೆ ಹೆಚ್ಚಿನ ಅನುದಾನ ಬರುವುದಿಲ್ಲ , ಈಗ ಹಂಚುತ್ತಿರುವ ಹಣದ ಲೆಕ್ಕ ನೋಡಿದಾಗ ಬರುವ ಅನುದಾನಕ್ಕೂ ಈ ಖರ್ಚಿಗೂ ಎತ್ತಲಿನ ಸಂಬಂಧ, ಇನ್ನು ಅಭಿವೃದ್ಧಿಯಾದರೂ ಹೇಗೆ ಸಾಧ್ಯ ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿದೆ.

0 Comments