ಚಿಕ್ಕಮಗಳೂರು : ಶಾಲಾ-ಕಾಲೇಜುಗಳು ಕಠಿಣ ನಿಯಮಾವಳಿಗಳನ್ನು ಅನುಸರಿಸಿ ಆರಂಭವಾಗಿದ್ದರೂ ಕೂಡ ಕೊರೋನ ವೈರಸ್ ನಿಯಂತ್ರಣ ಮಾಡಲು ಅಸಾಧ್ಯವಾಗಿದೆ.

ಕೊರೋನ ವೈರಸ್ ಗೆ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತುತ್ತಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಸಮೀಪದ ಸೀಗೋಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ನಡೆದಿದೆ. ಈ ಹಿಂದೆ ವಿಧ್ಯಾರ್ಥಿಗಳಿಗೆ ಕೊರೋನ ಪರೀಕ್ಷೆ ನಡೆಸಿದಾಗ ಶಾಲೆಯ ಮೂವರು ವಿದ್ಯಾರ್ಥಿಗಳಲ್ಲಿ ಹಾಗೂ ನಾಲ್ವರು ಸಿಬ್ಬಂದಿಗಳಲ್ಲಿ ಕೊರೋನ ದೃಢಪಟ್ಟಿತ್ತು. ನಂತರದಲ್ಲಿ ಉಳಿದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳ ಪರೀಕ್ಷೆ ನಡೆಸಿದ ಆರೋಗ್ಯ ಇಲಾಖೆ ವಸತಿ ಶಾಲೆಯ 418 ವಿಧ್ಯಾರ್ಥಿಗಳ ಪೈಕಿ 50 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದು ತಿಳಿದುಬಂದಿದೆ.

ಜವಾಹರ್ ನವೋದಯ ವಸತಿ  ವಿದ್ಯಾಲಯವನ್ನು ಜಿಲ್ಲಾಡಳಿತ ಸಿಲ್ ಡೌನ್ ಮಾಡಿದೆ, ಅಗತ್ಯ ವೈದ್ಯಕೀಯ ವ್ಯವಸ್ಥೆ ಮಾಡಿ ಸ್ಥಳದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ನಿಯೋಜನೆಯನ್ನು ಜಿಲ್ಲಾಡಳಿತ ಮಾಡಿದೆ. ಸ್ಥಳಕ್ಕೆ ಡಿ ಹೆಚ್ ಓ, ಸರ್ವೇಕ್ಷಣಾಧಿಕಾರಿ, ಆರೋಗ್ಯ ಸಿಬ್ಬಂದಿಗಳು ಭೇಟಿ ನೀಡಿದ್ದು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಇಲಾಖೆ ತೆಗೆದುಕೊಂಡಿದೆ. 

ತನು ಕೊಟ್ಟಿಗೆಹಾರ, ವರದಿಗಾರರು.