ಮಡಿಕೇರಿ : (ನ್ಯೂಸ್ ಮಲ್ನಾಡ್ ವರದಿ) ಇತ್ತೀಚಿನ ದಿನಗಳಲ್ಲಿ ಟಿಕ್ ಟಾಕ್ ಹಾಗೂ ರೀಲ್ಸ್ ಮಾಡುವುದು ಟ್ರೆಂಡ್ ಆಗಿದೆ. ಆದರೆ ಧಾರ್ಮಿಕ ಕ್ಷೇತ್ರದಲ್ಲಿ ರೀಲ್ ಮಾಡಿದ ಮೂವರು ಯುವತಿಯರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾವೇರಿಯ ಉಗಮಸ್ಥಾನ ತಲಕಾವೇರಿಯಲ್ಲಿ ಈ ಹಿಂದೆ ಮೂವರು ಯುವತಿಯರು ಇನ್ಸ್ಟಾಗ್ರಾಮ್ ರೀಲ್ ಮಾಡಿ ವೈರಲ್ ಆಗಿದ್ದರು. ಆ ಮೂವರನ್ನು ಕೂಡ ಕೊಡಗಿನ ಜನರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಧಾರ್ಮಿಕ ಕೇಂದ್ರಗಳ ಪಾವಿತ್ರ್ಯತೆಗೆ ಬೆಲೆ ಕೊಡುವುದನ್ನು ಮೊದಲು ಈ ಯುವತಿಯರು ಕಲಿಯಬೇಕು. ಈ ರೀತಿ ಧಾರ್ಮಿಕ ಕ್ಷೇತ್ರಗಳಲ್ಲಿ ನೃತ್ಯ ಅಥವಾ ರೀಲ್ ಮಾಡುವುದರಿಂದ ಅಲ್ಲಿನ ಕ್ಷೇತ್ರಕ್ಕೆ ಹಾಗೂ ಅದರ ಮಹಿಮೆಗೆ ಬೆಲೆ ನೀಡದಂತಾಗುತ್ತದೆ ಎಂದು ಕೊಡಗಿನ ಕೆಲವರು ಗುಡುಗಿದ್ದಾರೆ. 

ಈ ವಿಡಿಯೋದಿಂದ ವಿವಾದ ಭುಗಿಲೇಳುತ್ತಿದ್ದಂತೆ ಕೊಡಗಿನ ತಲಕಾವೇರಿಯಲ್ಲಿ ಮಾಡಿದ್ದ ರೀಲ್ ಅನ್ನು ಯುವತಿಯರು ತಮ್ಮ ಇನ್ಸ್ಟಾಗ್ರಾಮ್ ಅಕೌಂಟಿನಿಂದ ಡಿಲೀಟ್ ಮಾಡಿದ್ದಾರೆ ಹಾಗೂ ಪ್ರತ್ಯೇಕವಾಗಿ ಮೂವರು ಕೂಡ ಕೊಡವರಿಗೆ ಕ್ಷಮೆ ಯಾಚಿಸಿದ್ದಾರೆ. 

ಯಾರ ಭಾವನೆಗಳಿಗೂ ಧಕ್ಕೆ ತರಲು ನಾವು ವೀಡಿಯೋ ಮಾಡಿಲ್ಲ, ಅರಿಯದೆ ನಮ್ಮಿಂದ ತಪ್ಪಾಗಿದೆ. ದಯಮಾಡಿ ನಮ್ಮನ್ನು ನಿಮ್ಮ ಮನೆಯ ಹೆಣ್ಣು ಮಕ್ಕಳೆಂದು ಭಾವಿಸಿ ಕ್ಷಮಿಸಿಬಿಡಿ, ಮುಂದಿನ ದಿನಗಳಲ್ಲಿ ಇಂತಹ ತಪ್ಪು ಉಂಟಾಗದ ಹಾಗೆ ನಾವು ನೋಡಿಕೊಳ್ಳುತ್ತೇವೆ ಎಂದು ಯುವತಿಯರು ಜನರಲ್ಲಿ ಕ್ಷಮೆ ಯಾಚಿಸಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಮಾಡುವ ವೀಡಿಯೋಗಳು ಕೆಲವರನ್ನು ದೊಡ್ಡ ಮಟ್ಟದಲ್ಲಿ ಪರಿಚಯ ಮಾಡಿ ಕೊಡುತ್ತಿದ್ದರೆ ಇನ್ನೂ ಕೆಲವರು ವಿವಾದಗಳಿಗೆ ಒಳಗಾಗುವಂತೆ ಮಾಡಿದೆ. ಈ ರೀತಿಯ ವೀಡಿಯೋ ಮಾಡುವವರು ತಾವಿರುವ ಸ್ಥಳಗಳನ್ನು ಮುಖ್ಯವಾಗಿ ಗಮನಿಸಿಕೊಂಡು ನಂತರ ವೀಡಿಯೋ ಮಾಡಲು ಮುಂದಾಗಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಕಮೆಂಟ್ ಗಳು ಮೂಡಿ ಬರುತ್ತಿದೆ.