ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಪವಿತ್ರ ಕ್ಷೇತ್ರವಾದ ಶೃಂಗೇರಿಯ ಕಿಗ್ಗಾ ಹೋಬಳಿಯ ಶಾಂತಾ ಋಷ್ಯಶೃಂಗರ ಸನ್ನಿಧಿಯ ಶಾಲೆ ಒಂದಕ್ಕೆ ಕಿಡಿಗೇಡಿಗಳು ಹಾನಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾದ ಅಭಿನವ ರಮಾನಂದ ಪ್ರೌಢಶಾಲೆಗೆ ರಾತ್ರಿ ನುಗ್ಗಿದ ಕಿಡಿಗೇಡಿಗಳು ಶಾಲೆಯ ಆವರಣದಲ್ಲಿ ಬಾಟಲಿಗಳನ್ನು ಒಡೆದು ಹಾಕಿ, ಅಲ್ಲಿನ ಪೈಪುಗಳನ್ನು ಧ್ವಂಸಮಾಡಿ, ಶಾಲೆಯ ಕಿಟಕಿಗಳನ್ನು ಕೂಡ ಒಡೆದು ಹಾಕಿದ್ದಾರೆ.

ಘಟನೆಯ ಕುರಿತಾಗಿ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಮಾಹಿತಿ ಕಲೆಹಾಕುತ್ತಿದ್ದಾರೆ. ಕೆಲ ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸಿ ಮುಂದಿನ ನಡೆಯ ಕುರಿತು ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. 

ಒಂದೆಡೆ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳು ಬಾರದೇ ಇರುವ ಪ್ರಸ್ತುತ ಸನ್ನಿವೇಶದಲ್ಲಿ ಈ ರೀತಿಯ ಘಟನೆಗಳು ಮಕ್ಕಳನ್ನು ಹಾಗೂ ಪೋಷಕರನ್ನು ಇನ್ನಷ್ಟು ಸಂಕಷ್ಟದ ಪರಿಸ್ಥಿತಿಗೆ ಸಿಲುಕಿಸಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಸರ್ಕಾರಿ ಶಾಲೆಗಳ ಉಳಿವಿನ ಕಡೆಗೆ ಹೆಚ್ಚು ಗಮನ ಹರಿಸುವುದು ಎಲ್ಲರ ಜವಾಬ್ದಾರಿಯಾಗಿದೆ.