ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ದೇಶದಾದ್ಯಂತ ಕೊರೊನಾ ಸೋಂಕು ಮೂರನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತವು ಕೂಡ ಈ ನಿಟ್ಟಿನಲ್ಲಿ ಸೋಂಕನ್ನು ತಡೆಗಟ್ಟಲು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಾಗೂ ಮಾರ್ಗಸೂಚಿಗಳನ್ನು ಹೊರಡಿಸುತ್ತಿದೆ.

ಅಂತೆಯೇ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗಳ ಆದೇಶದಂತೆ ಅತಿ ಹೆಚ್ಚಿನದಾಗಿ ಶೃಂಗೇರಿಯ ಶ್ರೀ ಮಠಕ್ಕೆ ಆಗಮಿಸುವ ಭಕ್ತಾದಿಗಳು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕೆಂದು ಹಾಗೂ ಈ ಕುರಿತು ಹೆಚ್ಚಿನ ನಿಗಾವಹಿಸಬೇಕೆಂದು ತಿಳಿಸಿದೆ.

ಈ ಹಿಂದೆ ಕೊರೋನಾ ಆವರಿಸಿದ ಸಂದರ್ಭದಲ್ಲಿ ಅದನ್ನು ನಿಯಂತ್ರಿಸುವ ಸಲುವಾಗಿ ಶೃಂಗೇರಿ ಶ್ರೀಮಠವು ನೀಡಿದ ಸಹಕಾರವನ್ನು ಮುಂದುವರಿಸಬೇಕೆಂದು ಪತ್ರದ ಮೂಲಕ ತಹಶೀಲ್ದಾರ್ ಅವರು ಕೋರಿದ್ದಾರೆ.

ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕು ಹೆಚ್ಚಾಗದಂತೆ ನಿಯಂತ್ರಣ ಮಾಡಲು ಈ ಕ್ರಮಗಳು ಅಗತ್ಯವಾದ ಕಾರಣ, ಮುಂಬರುವ ದಿನಗಳಲ್ಲಿ ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದವರನ್ನು ಮಾತ್ರ ಶ್ರೀಮಠದ ಪ್ರವೇಶಕ್ಕೆ ಅನುಮತಿಸಬೇಕೆಂದು ತಹಶೀಲ್ದಾರ್ ಅವರು ತಿಳಿಸಿದ್ದಾರೆ.