ಚಿಕ್ಕಮಗಳೂರು :( ನ್ಯೂಸ್ ಮಲ್ನಾಡ್ ವರದಿ) ಶಾಲಾ-ಕಾಲೇಜುಗಳು ಕಠಿಣ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಆರಂಭವಾಗಿದ್ದರೂ ಕೂಡ ಮಲೆನಾಡು ಭಾಗದ ಶಾಲಾ ಮಕ್ಕಳಲ್ಲಿ ಕೊರೋನ ಸೋಂಕು ಹೆಚ್ಚಿನದಾಗಿ ಕಂಡುಬರುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಜೀವನ್ ಜ್ಯೋತಿ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಕೊರೋನ ತಗುಲಿದೆ. ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 10ಜನ ವಿದ್ಯಾರ್ಥಿಗಳಲ್ಲಿ ಹಾಗೂ ಓರ್ವ ಶಿಕ್ಷಕರಲ್ಲಿ ಕೊರೋನ ಪತ್ತೆಯಾಗಿದೆ.

ಈ ಹಿನ್ನೆಲೆ ಶಾಲೆಯನ್ನು ಒಂದು ವಾರಗಳ ಕಾಲ ಸೀಲ್ ಡೌನ್ ಮಾಡುವಂತೆ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕೆ ಎಂ ರಮೇಶ್ ಅವರು ಆದೇಶ ಹೊರಡಿಸಿದ್ದಾರೆ. ಸೋಂಕಿಗೆ ತುತ್ತಾಗಿರುವ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಮನೆಯಲ್ಲೇ ಐಸೋಲೇಷನ್ ಮಾಡಿ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ. ಸ್ಥಳಕ್ಕೆ ವೈದ್ಯಾಧಿಕಾರಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಹಾಗೂ ಮಾಹಿತಿ ಪಡೆದಿದ್ದಾರೆ.

ಈ ಹಿಂದೆಯೂ ಕೂಡ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಕೊರೋನ ಸೋಂಕು ಪತ್ತೆಯಾಗಿತ್ತು. ಅನಗತ್ಯವಾಗಿ ಭಯಪಡದೆ ಎಚ್ಚರದಿಂದ ಜಾಗೃತರಾಗಿರಬೇಕೆಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ತನು ಕೊಟ್ಟಿಗೆಹಾರ, ವರದಿಗಾರರು