ಶಿವಮೊಗ್ಗ :(ನ್ಯೂಸ್ ಮಲ್ನಾಡ್ ವರದಿ) ಕೊರೋನ ಸೋಂಕು ಹೆಚ್ಚಾಗಿ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕಂಡು ಬಂದ ಹಿನ್ನೆಲೆ ಭದ್ರಾವತಿಯ ಖಾಸಗೀ ಆಸ್ಪತ್ರೆ ಹಾಗೂ ನರ್ಸಿಂಗ್ ಹಾಸ್ಟೆಲ್ ಅನ್ನು  ಸೀಲ್ ಡೌನ್ ಮಾಡಲಾಗಿದೆ. 

ಕೊರೋನ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾದ ಹಿನ್ನೆಲೆ ರೋಗಿಗಳ ಜೊತೆಯಲ್ಲಿ ಪ್ರಾಥಮಿಕವಾಗಿ ಸಂಪರ್ಕದಲ್ಲಿರುವ ವೈದ್ಯರನ್ನು ಹಾಗೂ ನರ್ಸಿಂಗ್ ಸಿಬ್ಬಂದಿಗಳನ್ನು ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು. ನಂತರದಲ್ಲಿ ಬಂದ ವರದಿಯ ಪ್ರಕಾರ ನರ್ಸಿಂಗ್ ಕಾಲೇಜಿನ 24 ಜನರಲ್ಲಿ ಸೋಂಕು ಧೃಡವಾಗಿತ್ತು. ಈ ಹಿನ್ನೆಲೆ ಶಿವಮೊಗ್ಗದ ಜಿಲ್ಲಾ ಆರೋಗ್ಯಾಧಿಕಾರಿಗಳ ಸಲಹೆ ಮೇರೆಗೆ ಒಪಿಡಿ ಮತ್ತು ನರ್ಸಿಂಗ್ ಹಾಸ್ಟೆಲ್ ಬಂದ್ ಮಾಡಲಾಗಿದೆ ಎಂದು ತಿಳಿದುಬಂದಿದೆ. 

ನರ್ಸಿಂಗ್ ವಿದ್ಯಾರ್ಥಿಗಳ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪರೀಕ್ಷೆಗೆ ಒಳಪಡಿಸಲು ಈಗಾಗಲೇ  ಎಲ್ಲಾ ಕ್ರಮಗಳನ್ನು  ತೆಗೆದುಕೊಂಡಿದ್ದು ಯಾರು ಕೂಡ ಆತಂಕಕ್ಕೆ ಒಳಗಾಗದೆ ಎಚ್ಚರದಿಂದ ಇರಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.