ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ಧಾರ್ಮಿಕ ಸಮಾನತೆಯ ದೃಷ್ಟಿಯಿಂದ ಹನುಮಂತನ ದೇವಾಲಯದಲ್ಲಿ ದೇವರಿಗೆ ಮಾಡಿದ ಆರತಿಯನ್ನು ತೆಗೆದುಕೊಂಡಿದ್ದಕ್ಕಾಗಿ ಅದನ್ನು ವಿರೋಧಿಸಿ ಅವರಿಗಿದ್ದ ಮಸೀದಿ ಕಮಿಟಿ ಜವಾಬ್ದಾರಿಯಿಂದ ವಜಾಗೊಳಿಸಿದ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ.

ಜಾಮಿಯಾ ಮಸೀದಿಯ ಅಧ್ಯಕ್ಷರಾದ ಸಿ.ಎನ್.ಅಕ್ಮಲ್ ಅವರು ಆಂಜನೇಯ ದೇವಸ್ಥಾನಕ್ಕೆ ತೆರಳಿ ಅಲ್ಲಿ ದೇವರ ಮಂಗಳಾರತಿಯನ್ನು ಪಡೆದಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಅವರನ್ನು ಮಸೀದಿಯ ಅಧ್ಯಕ್ಷ ಸ್ಥಾನದಿಂದ ಹಠಾತ್ತನೆ ವಜಾ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ದೇವಾಲಯದಲ್ಲಿ ಏರ್ಪಡಿಸಿದ್ದ ವಿಶೇಷ ಪೂಜೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣಾ ಕಾರ್ಯಕ್ರಮದಲ್ಲಿ ಅಕ್ಮಲ್ ಅವರು ಪಾಲ್ಗೊಂಡಿದ್ದರು. ಈ ಒಂದೇ ಕಾರಣಕ್ಕೆ ಏಕಾಏಕಿ ಅವರ ಜವಾಬ್ದಾರಿಯಿಂದ ಕೆಳಗಿಳಿಸಲಾಗಿದೆ.

ಈ ಘಟನೆಯಿಂದ ಬೇಸರಗೊಂಡು ಪ್ರತಿಕ್ರಿಯಿಸಿರುವ ಅಕ್ಮಲ್ ಅವರು ನನ್ನ ಗಮನಕ್ಕೆ ಈ ಕುರಿತಾಗಿ ಯಾವುದೇ ವಿಚಾರವನ್ನು ತರದೇ ಏಕಾಏಕಿ ನಿರ್ಣಯ ತೆಗೆದುಕೊಂಡಿರುವುದು ಸರಿಯಲ್ಲ, ಇವರುಗಳು ನಿರ್ಧಾರ ತೆಗೆದುಕೊಳ್ಳುವ ಮೊದಲು ನನ್ನ ಗಮನಕ್ಕೆ ತರಬಹುದಿತ್ತು, ಅಥವಾ ನನಗೆ ನೊಟೀಸ್ ನೀಡಬಹುದಾಗಿತ್ತು, ಆದರೆ ಇದಾವ ಕೆಲಸವನ್ನು ಕಮಿಟಿಯ ಸದಸ್ಯರು ಮಾಡದೆ ಈ ನಿರ್ಣಯ ತೆಗೆದುಕೊಂಡಿರುವುದು ಸರಿಯಲ್ಲ ಎಂದರು. ಅಕ್ಮಲ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಜವಾಬ್ದಾರಿ ಹೊಂದಿರುವವರು ಸಹ ಆಗಿದ್ದಾರೆ.

ಅಕ್ಮಲ್ ವಿರುದ್ಧ ಠಾಣೆಗೆ ದೂರು ಸಲ್ಲಿಸಿದ ಧರ್ಮಗುರು :
ಈ ಘಟನೆಯ ನಂತರದಲ್ಲಿ ಅಕ್ಮಲ್ ಹಾಗೂ ಅವರ ಬೆಂಬಲಿಗರು ನ್ಯಾಯ ಕೇಳುವ ಸಲುವಾಗಿ ಜಾಮಿಯಾ ಮಸೀದಿಯ ಧರ್ಮಗುರು ಅವರ ಬಳಿ ತೆರಳಿದ್ದಾರೆ ಆಗ ಪರ ವಿರೋಧ ಚರ್ಚೆಯಾಗಿ ಅಲ್ಲಿದ್ದ ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆದಿದೆ. ಆ ಸಮಯದಲ್ಲಿ ಅಕ್ಮಲ್ ಬೆಂಬಲಿಗರು ಮಸೀದಿಯ ಧರ್ಮ ಗುರುಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಾಲ್ಕು ಜನರ ಮೇಲೆ ಧರ್ಮಗುರು ದೂರು ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.