ತೀರ್ಥಹಳ್ಳಿ : (ನ್ಯೂಸ್ ಮಲ್ನಾಡ್ ವರದಿ) ಒಂದೆಡೆ ಮಲೆನಾಡಿನ ಹಲವು ಕಡೆಗಳಲ್ಲಿ ನಿರಂತರವಾಗಿ ಗೋಹತ್ಯೆ ನಡೆಯುತ್ತಲಿವೆ, ಇನ್ನೊಂದೆಡೆ ಗೋವುಗಳ ಸಂರಕ್ಷಣೆ ಮಾಡುವ ಕುರಿತಾಗಿ ಮಠಾಧೀಶರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮುಂದಾಗಿದ್ದಾರೆ.
ಮೊನ್ನೆಯಷ್ಟೇ ತೀರ್ಥಹಳ್ಳಿಯ ಬೆಜ್ಜವಳ್ಳಿ ಬಳಿ ಗೋರಕ್ಷಣೆಗಾಗಿ ತೆರಳಿದ ಇಬ್ಬರು ಯುವಕರನ್ನು ಅಕ್ರಮ ಗೋಸಾಗಾಟ ನಡೆಸುತ್ತಿದ್ದ ಕಿಡಿಗೇಡಿಗಳು ತಮ್ಮ ವಾಹನವನ್ನು ಯುವಕರ ಮೇಲೆ ಹತ್ತಿಸಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಘಟನೆಯನ್ನು ಖಂಡಿಸಿ ಜಿಲ್ಲೆಯ ಹಲವೆಡೆಗಳಲ್ಲಿ ತೀವ್ರ ಪ್ರತಿಭಟನೆ ಹಾಗೂ ಮನವಿಯನ್ನು ಕೂಡ ಹಲವಾರು ಸಂಘಟನೆಗಳು ಸಲ್ಲಿಸಿದ್ದವು.
ತೀರ್ಥಹಳ್ಳಿಯ ಭೀಮನ ಕಟ್ಟೆ ಮಠದಲ್ಲಿ ಗೋ ಪ್ರೇಮಿಗಳ ಸಭೆ ನಡೆಯಿತು. ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಶ್ರೀ ಶ್ರೀ ರಘುವರೇಂದ್ರತೀರ್ಥ ಶ್ರೀ ಪಾದರು ತೀರ್ಥಹಳ್ಳಿಯಲ್ಲಿ ಅಕ್ರಮ ಗೋಸಾಗಾಟ ನಡೆದ ಕುರಿತಾಗಿ ತೀವ್ರ ವಿರೋಧ ವ್ಯಕ್ತಪಡಿಸಿದರು. ಹಾಗೂ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸಿಬಾರದು ಎಂದರು ಹಾಗೂ ಶ್ರೀ ಮಠಕ್ಕೆ ಸೇರುವ ಮೇಗರವಳ್ಳಿ ಸಮೀಪದ ಜಾಗವನ್ನು ಗೋಶಾಲೆ ನಿರ್ಮಾಣ ಮಾಡಲು ನೀಡುವುದಾಗಿ ತಿಳಿಸಿದರು.
ಮುಂದಿನ ದಿನಗಳಲ್ಲಿ ಗೋವುಗಳನ್ನು ಸಂರಕ್ಷಣೆ ಮಾಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಶ್ರೀಗಳು ತಿಳಿಸಿದರು. ಈ ಮಾತುಗಳಿಂದ ಆ ಪ್ರತಿಭಟನೆಯಲ್ಲಿ ಸೇರಿದ್ದ ನೂರಾರು ಜನರು ಹರ್ಷ ವ್ಯಕ್ತಪಡಿಸಿದರು.

0 Comments