ಕೊಡಗು :(ನ್ಯೂಸ್ ಮಲ್ನಾಡ್ ವರದಿ) ಶಾಲಾ ವಿದ್ಯಾರ್ಥಿಗಳು ಬಳಸುವ ನೀರಿನ ಟ್ಯಾಂಕ್ ಗೆ ಕಿಡಿಗೇಡಿಗಳು ರಾಸಾಯನಿಕ ವಿಷ ಬೆರೆಸಿದ ಘಟನೆ ಮಡಿಕೇರಿಯಲ್ಲಿ ಬೆಳಕಿಗೆ ಬಂದಿದೆ.
ಕೊಡಗು ಜಿಲ್ಲೆಯ ಸುಂಟಿಕೊಪ್ಪದ ಸರಕಾರಿ ಪ್ರಾಥಮಿಕ ಶಾಲೆಗೆ ಕಿಡಿಗೇಡಿಗಳು ವಿಷ ಬೆರೆಸಿದ ಘಟನೆ ವಿದ್ಯಾರ್ಥಿಗಳಿಂದ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಯಾವುದೇ ವಿದ್ಯಾರ್ಥಿಗಳು ಅಸ್ವಸ್ಥರಾಗದೆ, ತೊಂದರೆಗೀಡಾಗದೆ ಸುರಕ್ಷಿತವಾಗಿದ್ದಾರೆ. ಶಾಲೆಯ ಶೌಚಾಲಯಕ್ಕೆ ಹೋದ ಮಕ್ಕಳಿಗೆ ನೀರಿನಿಂದ ಕೆಟ್ಟ ವಾಸನೆ ಬರುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಎಚ್ಚೆತ್ತ ಮಕ್ಕಳು ಶಾಲೆಯ ಶಿಕ್ಷಕರಿಗೆ ಈ ಕುರಿತು ತಿಳಿಸಿದ್ದಾರೆ.
ಮಕ್ಕಳು ಈ ವಿಚಾರ ತಿಳಿಸುತ್ತಿದ್ದಂತೆ ಕೂಡಲೇ ಟ್ಯಾಂಕ್ ನೋಡಲು ತೆರಳಿದ ಶಿಕ್ಷಕರು ಟ್ಯಾಂಕ್ ನ ಮುಚ್ಚಳ ತೆರೆದಿರುವುದು ಹಾಗೂ ನೀರಿಗೆ ರಾಸಾಯನಿಕ ಮಿಶ್ರಣ ಆಗಿರುವುದನ್ನು ಖಚಿತಪಡಿಸಿಕೊಂಡು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಇಲಾಖೆಯ ಹಿರಿಯ ಅಧಿಕಾರಿಗಳು ಟ್ಯಾಂಕ್ ನೀರಿನ ಮಾದರಿಯನ್ನು ಪರೀಕ್ಷೆಗೆಂದು ಪ್ರಯೋಗಾಲಯಕ್ಕೆ ಕಳುಹಿಸಿದರು. ವರದಿಯ ಪ್ರಕಾರ ನೀರಿನಲ್ಲಿ ವಿಷಕಾರಿ ಅಂಶ ಬೆರೆತಿರುವುದು ಪತ್ತೆಯಾಗಿದೆ. ಶಾಲೆಯ ಮಕ್ಕಳಿಗೆ ಅಡುಗೆ ಮಾಡಲು ಬೇರೆ ಟ್ಯಾಂಕ್ ನ ನೀರನ್ನು ಬಳಕೆ ಮಾಡುತ್ತಿದ್ದ ಕಾರಣ ಸಂಭವಿಸುತ್ತಿದ್ದ ದೊಡ್ಡ ಅನಾಹುತ ತಪ್ಪಿದೆ.
ಘಟನೆಯ ಕುರಿತಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಠಾಣೆಯ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ಚಲನವಲನಗಳ ಕುರಿತಾಗಿ ಮಾಹಿತಿ ಕಲೆಹಾಕುತ್ತಿದ್ದಾರೆ

0 Comments