ಕೊಟ್ಟಿಗೆಹಾರ : ಚಾರ್ಮಾಡಿ ಘಾಟ್ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸಲು ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಅರಣ್ಯ ಇಲಾಖೆಯೊಂದಿಗೆ ಈ ಕುರಿತು ಚರ್ಚೆ ನಡೆಸಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ಪ್ರಯತ್ನ ನಡೆಸಲಾಗುತ್ತಿದೆ ಮುಂದಿನ ದಿನಗಳಲ್ಲಿ ಈ ಕುರಿತು ಸ್ಪಷ್ಟತೆ ದೊರೆಯಲಿದೆ ಎಂದರು.

ಈ ಕುರಿತು ಕೊಟ್ಟಿಗೆಹಾರದಲ್ಲಿ ನ್ಯೂಸ್ ಮಲ್ನಾಡ್ ಗೆ ಪ್ರತಿಕ್ರಿಯಿಸಿದ ಅವರು ಚಾರ್ಮಾಡಿ ಘಾಟಿಯಲ್ಲಿ ಪ್ರತಿವರ್ಷದ ಮಳೆಗಾಲದ ಸಂದರ್ಭದಲ್ಲಿ ಮಣ್ಣು ಕುಸಿಯುವುದು ಹಾಗೂ ಗುಡ್ಡ ಕುಸಿಯುವುದರಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ ಚಾರ್ಮಾಡಿ ಘಾಟ್ ರಸ್ತೆಯನ್ನು ಚತುಷ್ಪತ ರಸ್ತೆಯನ್ನಾಗಿ ಮಾಡಲು ಅಪೇಕ್ಷೆಯಿದೆ ಈ ಕುರಿತು ಅರಣ್ಯ ಇಲಾಖೆ ಆಕ್ಷೇಪಣೆಯು ಇದೆ ಸದ್ಯದಲ್ಲೇ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಅರಣ್ಯ ಇಲಾಖೆಯ ಜೊತೆ ಮಾತುಕತೆ ನಡೆಸಿ ಸಮಸ್ಯೆನಿವಾರಿಸಿ ಚಾರ್ಮಾಡಿ ರಸ್ತೆ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾರ್ಪಡಿಸಿ ಚತುಷ್ಪಥ ರಸ್ತೆ ಮಾಡಲು ಪ್ರಯತ್ನ ನಡೆದಿದೆ. ಮೂಲಭೂತ ಸೌಲಭ್ಯಕ್ಕೆ ಯಾವುದೇ ಅರಣ್ಯದ ಕಾಯ್ದೆ ಅಡಚಣೆಯಾಗದಂತೆ ಸಡಿಲಗೊಳಿಸಲು ಕೇಂದ್ರ ಪರಿಸರ ಮಂತ್ರಿಗಳ ಜೊತೆಗೆ ಚರ್ಚೆ ನಡೆಸಿದ್ದೇವೆ. ಈಗಾಗಲೇ ಕೊಟ್ಟಿಗೆಹಾರದಿಂದ ಮೂಡಿಗೆರೆ - ಬೇಲೂರು ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ ಎಂದರು.

ಅಕ್ರಮ ಮತಾಂತರದ ವಿರುದ್ಧವಾಗಿ ಪ್ರಬಲ ಕಾಯ್ದೆ ಜಾರಿಯಾಗಲಿದೆ : 

ಮತಾಂತರ ಕಾಯ್ದೆಯ ಕುರಿತಾಗಿ ಮಾತನಾಡಿದ ಅವರು ಮತಾಂತರದ ಕಾಯ್ದೆಯಲ್ಲಿರುವ ಎಲ್ಲಾ ಕಾನೂನುಗಳನ್ನು ಬಲವಾಗಿ ಜಾರಿಗೊಳಿಸಲು ನಮ್ಮ ಸರ್ಕಾರದ ಒಮ್ಮತದ ಅಪೇಕ್ಷೆಯಿದೆ, ಕಾಂಗ್ರೆಸ್ ಸರ್ಕಾರ ಇದನ್ನು ವಿರೋಧಿಸುತ್ತಿದೆ, ಬೇರೆ ಧರ್ಮದವರನ್ನು ಮತಕ್ಕಾಗಿ ಓಲೈಕೆ ಮಾಡಿಕೊಂಡು ತಮ್ಮ ಬೇಳೆಯನ್ನು ಬೇಯಿಸಿಕೊಂಡು ಕುರ್ಚಿಗಟ್ಟಿ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಗುಡುಗಿದರು. ಮತಾಂತರ ಎನ್ನುವುದು ಸಮಾಜಕ್ಕೆ ಮಾರಕವಾಗಿದೆ, ಅನಾರೋಗ್ಯ, ಬಡತನ, ಪ್ರೀತಿಯನ್ನು ದುರುಪಯೋಗ ಮಾಡಿಕೊಳ್ಳುವ ವ್ಯವಸ್ಥಿತ ಷಡ್ಯಂತ್ರ ದೇಶದಲ್ಲಿ ನಡೆಯುತ್ತಿದೆ. ಇದು ರಾಜ್ಯದಲ್ಲಿಯೂ ನಡೆಯುತ್ತಿದೆ. ಲವ್ ಜಿಹಾದ್ ಹೆಸರಿನಲ್ಲಿ ಸಾವಿರಾರು ಹೆಣ್ಣುಮಕ್ಕಳು ಮತಾಂತರ ಆಗುತ್ತಿದ್ದಾರೆ. ಅವರಿಗೆ ನೆಲೆಯಿಲ್ಲದ ಪರಿಸ್ಥಿತಿಯನ್ನು ಹಲವಾರು ಪ್ರದೇಶದಲ್ಲಿ ನೋಡುತ್ತಿದ್ದೇವೆ. ಇಂತಹ ಕೆಟ್ಟ ವ್ಯವಸ್ಥೆಗಳು ಸಮಾಜದಲ್ಲಿ ಇರಬಾರದು. ಅದಕ್ಕಾಗಿ ಅಕ್ರಮ ಮತಾಂತರ ನಿಷೇಧಕ್ಕೆ ನಮ್ಮ ಪ್ರಯತ್ನ ನಡೆಯುತ್ತಿದೆ ಎಂದರು. 

ತನು ಕೊಟ್ಟಿಗೆಹಾರ, ವರದಿಗಾರರು.