ತೀರ್ಥಹಳ್ಳಿ : (ನ್ಯೂಸ್ ಮಲ್ನಾಡ್ ವರದಿ) ತೀರ್ಥಹಳ್ಳಿ ಕಾಲೇಜಿನ ಹೆಸರಾಂತ ಉಪನ್ಯಾಸಕರೊಬ್ಬರು ನೇಣಿಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ.

ತೀರ್ಥಹಳ್ಳಿ ಪಟ್ಟಣದ ಬಾಳೆಬೈಲಿನಲ್ಲಿರುವ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರಾದ ಶ್ರೀ ಹರ್ಷ ಶಾನಭೋಗ್ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.  ಹಲವು ವರ್ಷಗಳ ಕಾಲ ತೀರ್ಥಹಳ್ಳಿಯ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾ ಅತ್ಯಂತ ಹೆಸರುವಾಸಿಯಾಗಿದ್ದ ಹಾಗೂ ವಿದ್ಯಾರ್ಥಿಗಳ ಅಚ್ಚುಮೆಚ್ಚಾಗಿದ್ದ ಉಪನ್ಯಾಸಕ ಆತ್ಮಹತ್ಯೆಗೆ ಶರಣಾಗಿರುವುದು ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜಿನ ಉಳಿದ ಶಿಕ್ಷಕರಿಗೆ ಅತ್ಯಂತ ನೋವುಂಟುಮಾಡಿದೆ ಎಂದು ವಿದ್ಯಾರ್ಥಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಕೊರೋನಾ ನಂತರದ ದಿನಗಳಲ್ಲಿ ಜೀವನ ನಿಭಾಯಿಸುವುದು ಬಹಳ ಕಷ್ಟ ಸಾಧ್ಯವಾಗಿತ್ತು, ಅತಿಥಿ ಉಪನ್ಯಾಸಕರಿಗೆ ಸರ್ಕಾರದ ಸೇವಾ ಭದ್ರತೆ ಆರ್ಥಿಕ ನೆರವು ಇಲ್ಲದೆ ಇರುವ ಕಾರಣ ಜೀವನ ನಡೆಸಲು ಕಷ್ಟವಾದ್ದರಿಂದ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಅವರ ಸಹಪಾಠಿಗಳು ತಿಳಿಸಿದ್ದಾರೆ. 

ವಿದ್ಯಾರ್ಥಿಗಳನ್ನು ಪರಿಪಕ್ವತೆ ಯೊಂದಿಗೆ ಸಮಾಜಕ್ಕೆ ನಿರ್ಮಿಸಿಕೊಡುವ ಶಿಕ್ಷಕರು ಮನನೊಂದು ಈ ರೀತಿಯ ನಿರ್ಧಾರಗಳನ್ನು ಕೈಗೊಂಡರೆ ಮುಂದಿನ ಸಮಾಜಕ್ಕೆ ದಾರಿ ತೋರಿಸುವವರಾರು ಎಂದು ಅಧ್ಯಾಪಕವೃಂದ ಬೇಸರ ವ್ಯಕ್ತಪಡಿಸಿದೆ.

ಸರ್ಕಾರ ಈ ಕೂಡಲೇ ಘಟನೆಯ ಕುರಿತಾಗಿ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿ ಮುಂದಿನ ದಿನಗಳಲ್ಲಿ ಪ್ರಾಧ್ಯಾಪಕರಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗದಂತೆ ಕ್ರಮ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.