ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಭೀಕರ ರಸ್ತೆ ಅಪಘಾತಗಳು ಸಂಭವಿಸುತ್ತಲೇ ಇದೆ. ಮಂಡಗದ್ದೆ ಸಮೀಪ ಈ ದುರಂತ ಸಂಭವಿಸಿದ್ದು ಬಸ್ ಹಾಗೂ ಈಚರ್ ಮುಖಾಮುಖಿ ಡಿಕ್ಕಿಯಾಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ರಸ್ತೆಯ ಮಂಡಗದ್ದೆ ಸಮೀಪದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಬಸ್ ಹಾಗೂ ಈಚರ್ ವಾಹನವು ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಇಪ್ಪತ್ತು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಅಪಘಾತಕ್ಕೀಡಾದ ಸಹ್ಯಾದ್ರಿ ಬಸ್ ಶಿವಮೊಗ್ಗದಿಂದ ತೀರ್ಥಹಳ್ಳಿಯೆಡೆಗೆ ಸಾಗುತ್ತಿತ್ತು ಹಾಗೂ ಈಚರ್ ಮೇಳಿಗೆಯಿಂದ ಶಿವಮೊಗ್ಗದ ಕಡೆಗೆ ಸಾಗುವ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಈ ಅಪಘಾತದಲ್ಲಿ ಗಾಯಗೊಂಡವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ತೀರ್ಥಹಳ್ಳಿಯ ಓರ್ವ ವ್ಯಕ್ತಿಗೆ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು ಆ ವ್ಯಕ್ತಿಯನ್ನು ಮಣಿಪಾಲದ ಆಸ್ಪತ್ರೆಗೆ ರವಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಪಘಾತವಾದ ಸ್ಥಳದಲ್ಲಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ. 

ಅಪಘಾತದ ಕುರಿತಾಗಿ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.