ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಗೆ ಬಸ್ ಡಿಪೋ  ಮಂಜೂರಾತಿಯಾಗಿ ಹಲವು ವರ್ಷಗಳೇ ಕಳೆದಿದ್ದರೂ ಇಲ್ಲಿನ ಜನರಿಗೆ ಡಿಪೋ ಕನಸು ಕನಸಾಗಿಯೇ ಉಳಿದಿದೆ. ಸಹಕಾರ ಸಾರಿಗೆ ಬಸ್ ಸಂಸ್ಥೆ ಮುಚ್ಚಿದ ನಂತರವಂತೂ ಹಳ್ಳಿಗಳಿಗೆ ಬಸ್ ವ್ಯವಸ್ಥೆಯೇ ಇಲ್ಲವಾಗಿದೆ. ಈ ಕುರಿತು ಸರ್ಕಾರದ ಗಮನ ಸೆಳೆಯಲು ಹಾಗೂ ತೊಡಕುಗಳನ್ನು ಬಗೆಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲು ಜನಸ್ಪಂದನದ ಮೂಲಕ ಶೃಂಗೇರಿಯ ಅನಿರುದ್ಧ ಎಂಬುವವರು ಅರ್ಜಿ ಮುಖೇನ ಮನವಿ ಮಾಡಿಕೊಂಡಿದ್ದರು ಇದಕ್ಕೆ ಪ್ರತಿಕ್ರಿಯಿಸಿರುವ ಇಲಾಖೆ ಡಿಪೋ ಪ್ರಾರಂಭಿಸಲು ಉಂಟಾಗಿರುವ ತೊಡಕಿನ ಕುರಿತು ಸವಿಸ್ತಾರವಾಗಿ ಉತ್ತರ ನೀಡಿದ್ದು ಅರಣ್ಯ ಇಲಾಖೆಯ ಅಡ್ಡಗಾಲೇ ಡಿಪೋ ವಿಳಂಬಕ್ಕೆ ಮುಖ್ಯ ಕಾರಣ ಎಂದು ತಿಳಿದು ಬಂದಿದೆ.

ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿಡ್ಲೆಯ ಸರ್ವೇ ನಂಬರ್ 416 ರ ಐದು ಎಕರೆ ಜಾಗವನ್ನು 2016 ರಲ್ಲಿ ಬಸ್ ಘಟಕದ ನಿರ್ಮಾಣಕ್ಕಾಗಿ ಸರ್ಕಾರ ಮಂಜೂರು ಮಾಡಿತ್ತು. ಜಾಗ ಪಡೆಯಲು 2008 ರಿಂದ 2016 ರ ವರೆಗೆ ಬಹಳಷ್ಟು ಪ್ರಯತ್ನಗಳು ನಡೆದಿತ್ತು ಅಂತಿಮವಾಗಿ 2016ರಲ್ಲಿ ಜಾಗ ಮಂಜೂರಾಗಿತ್ತು. ನಂತರ ಜಾಗವನ್ನು ಸರ್ವೇ ಮಾಡಿ ಅಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿತ್ತು. 

ಅರಣ್ಯ ಇಲಾಖೆಯು ಮೊದಲಿಗೆ 50 ಮರಗಳು ಇರುವುದಾಗಿ ವರದಿ ನೀಡಿ ಆ ನಂತರ 200 ಮರಗಳು ಇರುವುದಾಗಿ ವರದಿ ನೀಡಿರುತ್ತಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮರಗಳನ್ನು ತೆರವು ಗೊಳಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಎಂದು ಹೇಳುತ್ತಿದ್ದಾರೆ, ಆದರೆ ಈ ಕುರಿತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದಾಗ ಮಂಜೂರಾಗಿರುವ ಜಮೀನು ಕಂದಾಯ ಇಲಾಖೆಗೆ ಸೇರಿರುವ ಕಾರಣ ಬೇರೆ ಯಾವುದೇ ಅರ್ಜಿ ಸಲ್ಲಿಕೆಯ ಅವಶ್ಯಕತೆ ಇರುವುದಿಲ್ಲ, ಅರಣ್ಯ ಇಲಾಖೆಯ ಮೇಲಧಿಕಾರಿಗಳು ಸಹ ಅಂತಹ ಯಾವುದೇ ಅರ್ಜಿಯ ಅವಶ್ಯಕತೆ ಇಲ್ಲ ಎಂದು ಹೇಳಿರುವುದಾಗಿ ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಲ್ಲಿ ಜಾಗದ ಕುರಿತಾಗಿ ಯಾವುದೇ ತಕರಾರುಗಳು ಇಲ್ಲ ಆದರೆ ಮರಗಳ ತೆರವು ಕಾರ್ಯವನ್ನು ಅರಣ್ಯ ಇಲಾಖೆ ಮಾಡುತ್ತಿಲ್ಲ.

ಆರ್ಥಿಕ ಸಂಕಷ್ಟದಿಂದಾಗಿ ಯೋಜನೆ ಜಾರಿಯಲ್ಲಿಲ್ಲ : 

ಬಸ್ ಘಟಕ ನಿರ್ಮಾಣ ಮಾಡಲು 12 ಕೋಟಿಗಳಷ್ಟು ಹಣ ಬೇಕಾಗುತ್ತದೆ ಎಂದು ಅಂದಾಜು ಮಾಡಿರುವುದರಿಂದ ಸರ್ಕಾರವು ಒಮ್ಮೆಲೇ ಇಷ್ಟು ಹಣವನ್ನು  ಬಿಡುಗಡೆ ಮಾಡುವುದಿಲ್ಲ. ಈ ಹಣವು ಹಂತ ಹಂತವಾಗಿ ಬಿಡುಗಡೆಗೊಳ್ಳುತ್ತದೆ ಆದರೆ ಈ ಕಾಮಗಾರಿಗೆ ಹಣ ನೀಡಲು ಇದು ಸಮಯವಲ್ಲ ಎಂದು ಇಲಾಖೆ ತಿಳಿಸಿದೆ. ಕಳೆದ ವರ್ಷ ಲಾಕ್ ಡೌನ್ ಆದ ಕಾರಣ ಬಹಳಷ್ಟು ಬಸ್ ಗಳು ಸಂಚರಿಸಲಿಲ್ಲ ಹಾಗೂ ಈ ವಿಭಾಗಕ್ಕೆ ಹಣವಿಲ್ಲದ ಕಾರಣ ಮುಂದಿನ ದಿನಗಳಲ್ಲಿ ಈ ಕುರಿತಾಗಿ ನಿರ್ಧಾರ ಕೈಗೊಳ್ಳುವುದಾಗಿ ಇಲಾಖೆ ತಿಳಿಸಿದೆ. 

ಆದರೆ ಯಾವುದಕ್ಕೂ ಮೊದಲು ಜಾಗದಲ್ಲಿನ ಮರಗಳನ್ನು ತೆರವುಗೊಳಿಸಬೇಕಿದೆ. ಅರಣ್ಯ ಇಲಾಖೆಯು ಮರಗಳನ್ನು ತೆರವುಗೊಳಿಸಿದ್ದೇ ಆದಲ್ಲಿ ಅನುದಾನ ಬಿಡುಗಡೆಗೆ ಸರ್ಕಾರದ ಮೇಲೆ ಒತ್ತಡ ಹೇರಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ

ಶೃಂಗೇರಿಯ ಜನರಿಗೆ ಮೂಲಭೂತವಾಗಿ ಸಿಗಬೇಕಾದ ಎಲ್ಲಾ ಸೌಕರ್ಯಗಳು ಒಂದಿಲ್ಲೊಂದು ಕಾರಣಗಳಿಂದಾಗಿ ತಪ್ಪಿ ಹೋಗುತ್ತಿರುವುದು ಸಾಮಾನ್ಯ ಜನರ ಮನಸ್ಸಿಗೆ ಬೇಸರ ಉಂಟುಮಾಡಿದೆ. ಒಂದೆಡೆ ಅತ್ಯವಶ್ಯಕವಾಗಿ ಬೇಕಾದ ಸುಸಜ್ಜಿತ ಆಸ್ಪತ್ರೆಯು ಕೂಡ ಜನರಿಗಿಲ್ಲ, ಇನ್ನೊಂದೆಡೆ ಸಾರ್ವಜನಿಕರಿಗೆ ಉಪಯೋಗವಾಗುವ ಬಸ್ ಡಿಪೋ ಕೂಡ ಕನಸಾಗಿಯೇ ಉಳಿದಿದೆ.